ಸೋನಿಪತ್, ಅ.16 (DaijiworldNews/PY): ಸಿಂಘು ಗಡಿಯಲ್ಲಿ ನಡೆದ ಹತ್ಯೆಗೆ ಸಂಬಂಧಪಟ್ಟಂತೆ ಓರ್ವನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಆರೋಪಿಯನ್ನು ಸೋನಿಪತ್ನ ಕುಂಡ್ಲಿಯಿಂದ ಬಂಧಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖ್ ಬೀರ್ ಸಿಂಗ್ ಪಂಜಾಬ್ನ ಟಮ್ ಟರನ್ ಜಿಲ್ಲೆಯ ನಿವಾಸಿಯಾಗಿದ್ದು, ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಈತನ ಪೋಷಕರು ತೀರಿಕೊಂಡಿದ್ದ ಕಾರಣ ದಂಪತಿಗಳಿಬ್ಬರು ಈತನನ್ನು ದತ್ತು ಪಡೆದು ಬೆಳೆಸಿದ್ದರು. ಈತನಿಗೆ ತಂಗಿ, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ 35 ವರ್ಷದ ಲಖ್ ಬೀರ್ ಸಿಂಗ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆ ಆಂದೋಲನದ ಪ್ರಮುಖ ವೇದಿಕೆ ಬಳಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.