ಬೆಂಗಳೂರು, ಅ.15 (DaijiworldNews/PY): "ಕುಸಿದ ಆರ್ಥಿಕತೆ ಇನ್ನಷ್ಟು ಬಡತನ ಹೆಚ್ಚಿಸುತ್ತದೆ. ಇದನ್ನು ಗಮನಿಸದೆ, ಬಣ್ಣದ ಬಟ್ಟೆಯಲ್ಲಿ ಮಿಂಚುವುದಷ್ಟೇ ಪ್ರಧಾನಿಯ ಆದ್ಯತೆಯಾಗಿದೆ!" ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿತ ಕಂಡಿದ್ದು ಅತಿ ಆತಂಕಕಾರಿ. ನಿರಂತರ ಬೆಲೆ ಏರಿಕೆ ಇನ್ನಷ್ಟು ಬಡವರ ಮನೆಯ ಒಲೆಗಳನ್ನು ಆರಿಸುತ್ತದೆ. ನಿರುದ್ಯೋಗ ಇನ್ನಷ್ಟು ಹಸಿದವರನ್ನ ಹೆಚ್ಚಿಸುತ್ತದೆ. ಕುಸಿದ ಆರ್ಥಿಕತೆ ಇನ್ನಷ್ಟು ಬಡತನ ಹೆಚ್ಚಿಸುತ್ತದೆ. ಇದನ್ನು ಗಮನಿಸದೆ, ಬಣ್ಣದ ಬಟ್ಟೆಯಲ್ಲಿ ಮಿಂಚುವುದಷ್ಟೇ ಪ್ರಧಾನಿಯ ಆದ್ಯತೆಯಾಗಿದೆ!" ಎಂದಿದೆ.
"ಆಹಾರ ಭಾರತದ ಪ್ರತಿ ನಾಗರಿಕನ ಹಕ್ಕು ಎಂದು ನಿರ್ಧರಿಸಿದ ಮಹತ್ತರವಾದ ಆಹಾರ ಭದ್ರತಾ ಕಾಯ್ದೆಯನ್ನ ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಕಾಯ್ದೆಯ ಪ್ರಕಾರ ಪ್ರತಿ ನಾಗರಿಕನೂ ಆಹಾರ ಪಡೆಯುವ ಹಕ್ಕು ಹೊಂದಿದ್ದಾನೆ, ಯಾರೂ ಹಸಿದಿರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ ಈಗ ಬಿಜೆಪಿ ಸರ್ಕಾರ ಹಸಿವನ್ನೇ ದೇಶಕ್ಕೆ ಕೊಡುಗೆಯಾಗಿ ನೀಡಿದೆ!" ಎಂದು ಹೇಳಿದೆ.
"ಮೊದಲು ಹಬ್ಬದ ಸಂದರ್ಭದಲ್ಲಿ ಬೋನಸ್ ನೀಡಲಾಗುತ್ತಿತ್ತು, ಆದರೆ ಈಗ ಬೋನಸ್ ಇರಲಿ ಸಂಬಳವನ್ನೂ ನೀಡದೆ ಸಾರಿಗೆ ನೌಕರರ ಬದುಕಿನ ಸಡಗರವನ್ನ ಕಿತ್ತುಕೊಂಡಿದೆ ಬಿಜೆಪಿ ಸರ್ಕಾರ. ಬಸ್ಗಳ ಪೂಜೆಗೆ ನಾಲ್ಕು ನಿಂಬೆ ಹಣ್ಣಿಗೂ ಸಾಲದ 100ರೂ.ಗಳನ್ನು ನೀಡಿದ್ದು ಸರ್ಕಾರದ ಅಯೋಗ್ಯತನವನ್ನು ತೋರಿಸುತ್ತದೆ" ಎಂದಿದೆ.