ವಿಜಯಪುರ, ಅ.15 (DaijiworldNews/PY): ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಇದರ ಹಿಂದೆ ಯಾರ್ಯಾರು ಇದ್ದಾರೆ. ಯಾರ ಕೈವಾಡವಿದೆ ಎನ್ನುವುದು ತಿಳಿದಿದೆ. ಸಿಡಿ ಇದ್ದರೂ ಬಿಡುಗಡೆ ಮಾಡಲಿ" ಎಂದು ಸವಾಲೆಸೆದಿದ್ದಾರೆ.
"ಫೋಟೋ ವೈರಲ್ ವಿಚಾರದ ಹಿಂದೆ ಯಾರ್ಯಾರು ಇದ್ದಾರೆ ಎನ್ನುವ ಬಗ್ಗೆ ನನಗೆ ದಾಖಲೆ ಸಮೇತ ಮಾಹಿತಿ ಇದೆ. ಅವರಿಗೆ ತಕ್ಕ ಶಾಸ್ತಿ ಆಗುತ್ತದೆ. ಭ್ರಷ್ಟಾಚಾರದ ವಿರುದ್ದ, ಹಿಂದುತ್ವದ ಪರ ನಾನು ಮಾತನಾಡುತ್ತೇನೆ. ಹಾಗಾಗಿ ಅವರಿಗೆ ನನ್ನ ಮಾತುಗಳು ಸಮಸ್ಯೆಯಾಗಿವೆ. ಫೋಟೋ ವೈರಲ್ ಮಾಡಿದ ಕೃತ್ಯದ ಹಿಂದೆ ಎಲ್ಲಾ ಪಕ್ಷದವರೂ ಇದ್ದಾರೆ. ಸಿಡಿ ಮಾಡುವ ಫ್ಯಾಕ್ಟರಿ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿದೆ" ಎಂದು ಕಿಡಿಕಾರಿದ್ದಾರೆ.
"ಪೊಲೀಸರು ಫೋಟೋ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂದು ಸ್ವಲ್ಪ ದಿನದಲ್ಲೇ ಬಹಿರಂಗವಾಗುತ್ತದೆ" ಎಂದು ತಿಳಿಸಿದ್ದಾರೆ.
ಬಿಜೆಪಿ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲೆಂದು ಆಶಿಸುವೆ ಎನ್ನುವ ಬರಹವಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಯತ್ನಾಳ್ ಕಿಡಿಕಾರಿದ್ದು, "ಫೋಟೋ ಮಾತ್ರವಲ್ಲ ಸಿಡಿ ಇದ್ದರೂ ಬಿಡುಗಡೆ ಮಾಡಿ. ನಾನು ಯಾವುದಕ್ಕೂ ಅಂಜುವುದಿಲ್ಲ" ಎಂದು ಹೇಳಿದ್ದಾರೆ.