ನವದೆಹಲಿ, ಅ 15 (DaijiworldNews/MS): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಸಿವು, ನಿರುದ್ಯೋಗ ಮತ್ತು ಬಡತನದಂತಹ ನೈಜ ಸಮಸ್ಯೆಗಳತ್ತ ಗಮನ ಹರಿಸಲು ಬಯಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಷ್ಟ್ರೀಯ ವಕ್ತಾರ ಸುಧೀಂದ್ರ ಭಡೋರಿಯಾ ಶುಕ್ರವಾರ ಹೇಳಿದ್ದಾರೆ.
"ಜನಸಂಖ್ಯೆಯ ಅಸಮತೋಲನ" ಕುರಿತು ಆರ್ಎಸ್ಎಸ್ ಮುಖ್ಯಸ್ಥರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಡೋರಿಯಾ, "ಮೋಹನ್ ಭಾಗವತ್ ಅವರು ನಿಜವಾದ ಸಮಸ್ಯೆಗಳತ್ತ ಗಮನ ಹರಿಸಲು ಬಯಸುವುದಿಲ್ಲ. ದೇಶದ ನಿಜವಾದ ಸಮಸ್ಯೆಗಳಾದ ಹಸಿವು, ನಿರುದ್ಯೋಗ, ಬಡತನ ಮತ್ತು ಅಪೌಷ್ಟಿಕತೆ, ಆರೋಗ್ಯ ಮತ್ತು ಶಿಕ್ಷಣ ಇವುಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ ಹಾಗೂ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದ್ದಾನೆ " ಎಂದು ಹೇಳಿದ್ದಾರೆ
"ಈ ಭಾರತವು ಅಸಮಾನ ಭಾರತವಾಗುತ್ತಿದೆ. ಬಿಜೆಪಿ ಸರ್ಕಾರವು ಇದರ ಬಗ್ಗೆ ಗಮನ ಹರಿಸಬೇಕು ಮತ್ತು ಸಂಘವು ಕೂಡ ಈ ಬಗ್ಗೆ ಗಮನ ಹರಿಸಬೇಕು" ಎಂದು ಅವರು ಹೇಳಿದರು.
ಭಾಗವತ್ ಅವರು ಶುಕ್ರವಾರ ವಿಜಯ ದಶಮಿಯಂದು ಮಾಡಿದ ಭಾಷಣದಲ್ಲಿ ದೇಶದ "ಜನಸಂಖ್ಯೆಯ ಅಸಮತೋಲನ" ದ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಷ್ಟ್ರದ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದರು.
"ಸ್ಥಳೀಯ ಹಿಂದುಗಳ ಮೇಲೆ ದೌರ್ಜನ್ಯ, ಹೆಚ್ಚುತ್ತಿರುವ ಅಪರಾಧೀಕರಣ ಮತ್ತು ಅಸಮತೋಲಿತ ಜನಸಂಖ್ಯೆ ಬೆಳವಣಿಗೆ ಕಂಡುಬಂದ ತಮ್ಮ ಪ್ರದೇಶಗಳಿಂದ ತಪ್ಪಿಸಿಕೊಳ್ಳಲು ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯ ನಂತರ ಉಂಟಾದ ಹಿಂಸೆ ಮತ್ತು ಅಲ್ಲಿನ ಹಿಂದೂ ಜನರ ದಯನೀಯ ಸ್ಥಿತಿಗೂ ಕಾರಣವಾಗಿದೆ" ಎಂದು ಆರೋಪಿಸಿದ್ದರು.