ಸೂರತ್, ಅ.15 (DaijiworldNews/PY): "ಸಾಮಾನ್ಯ ಹಿನ್ನೆಲೆಯಿಂದ ಬಂದ ನನಗೆ ಜನರು ಮೊದಲ ಬಾರಿಗೆ ಗುಜರಾತ್ ರಾಜ್ಯದಲ್ಲಿ, ಬಳಿಕ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸೂರತ್ನಲ್ಲಿ ಬಾಲಕರ ವಸತಿ ನಿಲಯಕ್ಕೆ ವರ್ಚುವಲ್ ಕಾರ್ಯಕ್ರಮದ ಮೂಲಕ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದ ಸಾಮಾನ್ಯ ಹಿನ್ನೆಲೆ ಹೊಂದಿರುವ ನನಗೆ ಗುಜರಾತ್ ರಾಜ್ಯ ನಂತರ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಜನರು ನನಗೆ ಅವಕಾಶ ಕಲ್ಪಿಸಿದ್ದಾರೆ" ಎಂದಿದ್ದಾರೆ.
"ನಿಮ್ಮ ಆಶೀರ್ವಾದದಿಂದ ನಾನು 20 ವರ್ಷಗಳ ಬಳಿಕವೂ ಸೇವೆ ಸಲ್ಲಿಸುವಂತೆ ಮಾಡಿದೆ. ನಾನು ಮೊದಲು ಗುಜರಾತ್ ರಾಜ್ಯದ ಸೇವಕನಾಗಿದ್ದೆ. ಪ್ರಸ್ತುತ ನಾನು ದೇಶದ ಜನರಿಗೆ ಸೇವೆ ಸಲ್ಲಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ಈ ವೇಳೆ ಜನರಲ್ಲಿ ಮನವಿ ಮಾಡಿಕೊಂಡ ಪ್ರಧಾನಿ ಮೋದಿ, ಭಾರತದ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ತೋರಿರುವ ಮಾರ್ಗದಲ್ಲಿ ಸಾಗುವಂತೆ ಹೇಳಿದರು.
"ವಲ್ಲಭಬಾಯ್ ಪಟೇಲ್ ಅವರ ಮಾತಿನಂತೆ ನಮಗೆ ಜಾತಿ ಹಾಗೂ ಧರ್ಮದ ಮೇಲಿನ ನಂಬಿಕೆ ತೊಡಕಾಗಬಾರದು. ನಾವೆಲ್ಲರೂ ದೇಶವನ್ನು ಪ್ರೀತಿಸಬೇಕು" ಎಂದಿದ್ದಾರೆ.