ಬೆಂಗಳೂರು, ಅ 15 (DaijiworldNews/MS): ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಸ್ಥಾನದಲ್ಲಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 94ನೇ ಸ್ಥಾನದಿಂದ 101ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಹಸಿವು, ಅಪೌಷ್ಟಿಕತೆ ಹೊಂದಿರುವುದು ಕಳವಳಕಾರಿ ಸಂಗತಿ. ಮೋದಿಯವರ ‘ನಹೀ ಖಾನೇ ದೂಂಗಾ’ ಮಾತಿನ ಅಸಲಿ ಅರ್ಥ ಇದೇ ಏನೋ!' ಎಂದು ವ್ಯಂಗ್ಯವಾಡಿದೆ.
ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು.ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ 76, ಬಾಂಗ್ಲಾದೇಶ 76, ಮ್ಯಾನ್ಮಾರ್ 71 ಮತ್ತು ಪಾಕಿಸ್ತಾನ 92ನೇ ರ್ಯಾಂಕ್ ಪಡೆದಿವೆ.
ಇನ್ನೊಂದೆಡೆ ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ "ರಾಷ್ಟ್ರದ ಬಡತನ ಮತ್ತು ಹಸಿವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದಕ್ಕೆ ಮೋದಿ ಜೀ ಅವರಿಗೆ ಅಭಿನಂದನೆಗಳು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.