ಬೆಂಗಳೂರು, ಅ.15 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, "ನನ್ನ ತಂದೆ ರಾಷ್ಟ್ರೀಯವಾದಿ, ನಾನು ಅದನ್ನು ಪಾಲಿಸುತ್ತಿದ್ದೇನೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, "ನನ್ನ ತಂದೆ ಸಾರ್ವಜನಿಕ ಜೀವನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ಕಲಿಸಿದ್ದು, ಅವರು ನನಗೆ ಮಾರ್ಗದರ್ಶನ ನೀಡಿದ್ದಾರೆ. ಇದೇ ರೀತಿಯಾದ ಮಾರ್ಗದರ್ಶನವನ್ನು ನಿಮಗೂ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
"ನನ್ನ ತಂದೆ ರಾಷ್ಟ್ರೀಯವಾದಿ, ನಾನು ಅದನ್ನು ಪಾಲಿಸುತ್ತಿದ್ದೇನೆ. ಆರ್ಎಸ್ಎಸ್ ಕೂಡಾ ಅದನ್ನೇ ಪ್ರತಿಪಾದಿಸುತ್ತದೆ. ಸಿದ್ದರಾಮಯ್ಯ ಅವರರೇ ನೀವು ಕಾಂಗ್ರೆಸ್ ವಿರುದ್ದ ಜೀವನ ಪರ್ಯಂತ ಹೋರಾಟ ಮಾಡುತ್ತಾ ಬಂದಿದ್ದೀರಿ. ಈಗ ನೀವು ಒಂದು ಕುಟುಂಬದ ಹಿನ್ನೆಲೆ ಗಾಯಕರಾಗಿದ್ದೀರಿ" ಎಂದು ಟೀಕಿಸಿದ್ದಾರೆ.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನನ್ನಿಂದ ಆಡಳಿತವನ್ನಾಗಲಿ, ಪೊಲೀಸಿಂಗ್ ಆಗಲಿ ಕಲಿಯಬೇಕಿಲ್ಲ ಎಂದು ಹೇಳಿದ್ದೀರಿ, ಧನ್ಯವಾದಗಳು. ನನ್ನಿಂದಾಗಲಿ, ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಂದಾಗಲಿ ನೀವು ಏನಾದರೂ ಕಲಿತಿದ್ದರೆ, ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದೀರಿ ಅಲ್ಲವೇ? ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು. ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.