ಸೋನಿಪತ್, ಅ.15 (DaijiworldNews/PY): ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ 35 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆ ಆಂದೋಲನದ ಪ್ರಮುಖ ವೇದಿಕೆ ಬಳಿ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಲೆಯಾದ ಯುವಕನ ದೇಹದ ಮೇಲೆ ಹರಿತವಾದ ಆಯುಧಗಳಿಂದ ಮಾಡಿದ ದಾಳಿಯ ಗುರುತುಗಳಿದ್ದು, ಕೈಕಾಲು ಕತ್ತರಿಸಿ ದೇಹವನ್ನು ಬ್ಯಾರಿಕೇಡ್ಗೆ ನೇತು ಹಾಕಿದ್ದಾರೆ. ನಿಹಾಂಗ್ಸ್ ಮೇಲೆ ಕೊಲೆ ಆರೋಪ ಮಾಡಲಾಗುತ್ತಿದೆ.
ಯುವಕನ ಹತ್ಯೆಯಿಂದ ಚಳವಳಿಗಾರರು ಕೋಪಗೊಂಡಿದ್ದು, "ಈ ಕೊಲೆಗೆ ನಿಹಾಂಗ್ ಎಂಬ ಸಿಖ್ ಯೋಧರ ಗುಂಪು ಕಾರಣ" ಎಂದು ಆರೋಪಿಸಿದ್ದಾರೆ.
"ರೈತರ ಚಳವಳಿಯ ಹೆಸರಿನಲ್ಲಿ ಅತ್ಯಾಚಾರ, ಕೊಲೆ, ವೇಶ್ಯಾವಾಟಿಕೆ, ಹಿಂಸೆ ಹಾಗೂ ಅರಾಜಕತೆ ನಡೆಯುತ್ತಿವೆ. ಈಗ ಹರಿಯಾಣದ ಕುಂಡ್ಲಿ ಗಡಿಯಲ್ಲಿ ಯುವಕನ ಕ್ರೂರ ಹತ್ಯೆ. ಏನೆಲ್ಲಾ ನಡೆಯುತ್ತಿದೆ?. ರೈತರ ಆಂದೋಲನದ ಹೆಸರಿನಲ್ಲಿ ಯಾರು ಈ ಅರಾಜಕತೆ ಮಾಡುತ್ತಿದ್ದಾರೆ. ರೈತರನ್ನು ಅವರು ಅವಹೇಳನ ಮಾಡುತ್ತಿದ್ದಾರೆ" ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ಸೋನಿಪತ್ ಡಿಎಸ್ಪಿ ಈ ಬಗ್ಗೆ ಮಾಹಿತಿ ನೀಡಿದ್ದು, "ಇಂದು ಮುಂಜಾನೆ 5 ಗಂಟೆ ಸುಮಾರಿಗೆ ರೈತರ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಯುವಕನ ಮೃತದೇಹವೊಂದು ಕೈಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದಕ್ಕೆ ಯಾರು ಹೊಣೆಗಾರರು ಎಂದು ತಿಳಿದುಬಂದಿಲ್ಲ. ಅಪರಿಚಿತರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ವೈರಲ್ ವಿಡಿಯೋ ಕೂಡಾ ತನಿಖೆಯಲ್ಲಿದೆ" ಎಂದು ತಿಳಿಸಿದ್ದಾರೆ.