ಬೆಂಗಳೂರು, ಅ 15 (DaijiworldNews/MS): 'ಎಂ.ಎ.ಸಲೀಂ ಮತ್ತು ಉಗ್ರಪ್ಪ ಮಾತನಾಡಿರುವುದು ಸತ್ಯ. ಡಿಕೆಶಿ ರೀಟೇಲ್ ವ್ಯಾಪಾರಿಯಲ್ಲ, ಹೋಲ್ ಸೇಲ್ ವ್ಯಾಪಾರಿ, ಬೇನಾಮಿ ಹೆಸರಿನಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ' ಎಂಬ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದು " ಮೊದಲು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ರಾಜಕೀಯವಾಗಿ ಜಾಗ ಇಲ್ಲದೆ ಹುಡುಕುತ್ತಿದ್ದಾರೆ " ಎಂದು ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಮೆಂಟಲ್ ಆಸ್ಪತ್ರೆಯಲ್ಲಿ ಇರಬೇಕಾದವರು ಮಾತಾಡ್ತಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದರು. ಅವರು ಆರೋಪಿಸಿದಂತಹ ಯಾವುದಾದರೂ ನನ್ನ ಆಸ್ತಿ ಇದ್ದರೆ ಅವನೇ ಮಡ್ಕೊಳ್ಳಿ (ಇಟ್ಟುಕೊಳ್ಳಲಿ), ಅವನಿಗೆ ಎಲ್ಲಾ ಕೊಟ್ಟು ಬಿಡ್ತೀನಿ. ರಾಜಕೀಯ ವಾಗಿ ಅವನಿಗೆ ಜಾಗ ಇಲ್ಲ ಹೀಗಾಗಿ ಮಾತಾಡ್ತಿದ್ದಾನೆ. ಮೊದಲು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದು ಡಿಕೆಶಿ ಖಡಕ್ ತಿರುಗೇಟು ನೀಡಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಸೊಗಡು ಶಿವಣ್ಣ, ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿ ಕೆ ಶಿವಕುಮಾರ್ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿಕೊಂಡಿದ್ದಾರೆ. ತುಮಕೂರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ. ಪಾವಗಡದಲ್ಲಿ ಸೋಲಾರ್ ಪಾರ್ಕ್, 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಂಚಿನ ಫ್ಯಾಕ್ಟರಿ, ಗಣಿ ತಯಾರಿಕೆ ಕಾರ್ಖಾನೆಗಳಿವೆ. ಇವೆಲ್ಲಾ ಬೇನಾಮಿ ಹೆಸರುಗಳಲ್ಲಿದ್ದು ಡಿಕೆಶಿ ಅಕ್ರಮವಾಗಿ ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.