ನಾಗ್ಪುರ, ಅ.15 (DaijiworldNews/PY): "ತಾಲಿಬಾನ್ ಬದಲಾಗಬಹುದು. ಆದರೆ, ಪಾಕಿಸ್ತಾನ ಬದಲಾಗುವುದಿಲ್ಲ. ತಾಲಿಬಾನ್ನ ಚರಿತ್ರೆ ಎಲ್ಲರಿಗೂ ತಿಳಿದಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಆರ್ಎಸ್ಎಸ್ ಕಚೇರಿಯಲ್ಲಿ ಮಾತನಾಡಿದ ಅವರು, "ಚೀನಾ ಹಾಗೂ ಪಾಕ್ ತಾಲಿಬಾನ್ನ ಜೊತೆಗಿವೆ. ಒಂದು ವೇಳೆ ತಾಲಿಬಾನ್ ಬದಲಾಗಬಹುದು. ಆದರೆ, ಪಾಕಿಸ್ತಾನ ಎಂದಿಗೂ ಬದಲಾಗುವುದಿಲ್ಲ. ತಾಲಿಬಾನ್ನ ಚರಿತ್ರೆ ಎಲ್ಲರಿಗೂ ತಿಳಿದಿದೆ. ಕಾಶ್ಮೀರದಲ್ಲಿ ಮುಗ್ಧರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಉಗ್ರರು ಜನರನ್ನು ಹೆದರಿಸಲು ಟಾರ್ಗೆಟ್ ಹತ್ಯೆ ಮಾಡುತ್ತಿದ್ದಾರೆ" ಎಂದಿದ್ದಾರೆ.
"ದೇಶ ವಿಭಜನೆಯಾಗಿದ್ದು ಅತ್ಯಂತ ನೋವಿನ ಸಂಗತಿ. ಇಡೀ ವಿಶ್ವವೇ ಒಂದೇ ಎಂದು ಭಾವಿಸಿದ್ದೆವು. ಸಾಮಾಜಿಕ ಜೀವನ ಒಗ್ಗೂಡುವಿಕೆಗೆ ಭಾಷೆಯ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.
"ಕೊರೊನಾ ನಿಯಂತ್ರಣದಲ್ಲಿ ಭಾರತದ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ನಾವು ಕೊರೊನಾದ ಮೂರನೇ ಅಲೆಯನ್ನು ಎದುರಿಸಲು ಸಿದ್ಧರಿದ್ದೇವೆ. ಕೊರೊನಾದ ನಡುವೆಯೂ ನಮ್ಮ ದೇಶದ ಅರ್ಥ ವ್ಯವಸ್ಥೆ ಸ್ಥಿರವಾಗಿದೆ" ಎಂದು ತಿಳಿಸಿದ್ದಾರೆ.
"ಹಿಂದೂ ಸಮಾಜದಲ್ಲಿ ದೇವಸ್ಥಾನಗಳ ಸ್ಥಿತಿ ಉತ್ತಮವಾಗಿಲ್ಲ. ದಕ್ಷಿಣ ಭಾರತದಲ್ಲಿ ದೇವಾಲಯಗಳು ಸರ್ಕಾರದ ಅಧೀನದಲ್ಲಿವೆ, ಇನ್ನೂ ಕೆಲವು ಭಕ್ತರ ಅಧೀನದಲ್ಲಿವೆ. ಕೆಲವು ದೇವಾಲಯಗಳನ್ನೂ ಸಂಪೂರ್ಣವಾಗಿ ಲೂಟಿ ಮಾಡಲಾಗುತ್ತಿದೆ" ಎಂದಿದ್ದಾರೆ.