ಬೆಂಗಳೂರು, ಅ.15 (DaijiworldNews/PY): "ಅಕ್ಟೋಬರ್ 20ರ ಬಳಿಕ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸಿಂದಗಿ, ಹಾನಗಲ್ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ ಎಸ್ ಯಡಿಯೂರಪ್ಪ ಅವರು ಅಕ್ಟೋಬರ್ 20ರ ಬಳಿಕ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ ಸಲುವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
"ಬಿಎಸ್ವೈ ಅವರನ್ನು ಇಂದು ಭೇಟಿಯಾಗಿ ದಸರಾ ಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆದಿದ್ದೇನೆ. ಇಂದು ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವೆ" ಎಂದಿದ್ದಾರೆ.
"ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಸುಖ, ಆರೋಗ್ಯ, ಸಮೃದ್ಧಿಗಳನ್ನು ಕರುಣಿಸಲಿ, ಸಾಂಕ್ರಾಮಿಕವೂ ಸೇರಿದಂತೆ ಎಲ್ಲ ದುರಿತಗಳನ್ನು ಪರಿಹರಿಸಲಿ, ಎಲ್ಲರಿಗೂ ವಿಜಯವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯ ತಿಳಿಸಿದ್ದಾರೆ.