ನವದೆಹಲಿ, ಅ.15 (DaijiworldNews/PY): ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ (58) ಅನಾರೋಗ್ಯದ ಹಿನ್ನೆಲೆ ಛತ್ತೀಸ್ಗಡದಲ್ಲಿ ನಿಧನರಾಗಿರುವುದಾಗಿ ಮೂಲಗಳು ಹೇಳಿವೆ.
ಛತ್ತೀಸ್ಗಡದ ಪೊಲೀಸರು ಮಾವೋವಾದಿ ಉನ್ನತ ನಾಯಕನ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ಕೂಡಾ ಖಚಿತಪಡಿಸಿರುವುದಾಗಿ ವರದಿ ತಿಳಿಸಿದೆ. ಇವರ ಸಾವಿನ ಬಗ್ಗೆ ಸಿಪಿಐ ಯಾವುದೇ ಪ್ರಕಟಣೆ ನೀಡಿಲ್ಲ.
ಆರ್ ಕೆ ಎಂದೇ ಕುಖ್ಯಾತಿ ಪಡೆದಿದ್ದ ಇವರು ದೀರ್ಘಕಾಲದ ಅನಾರೋಗ್ಯದಿಂದ ದಕ್ಷಿಣ ಬಸ್ತಾರ್ನಲ್ಲಿ ಬುಧವಾರ ನಿಧನರಾಗಿರುವುದಾಗಿ ತಿಳಿಸಿದೆ.
ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಹಾಗೂ ನಿಷೇಧಿತ ಸಂಘಟನೆಯ ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿ ಆರ್ ಕೆ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ಹೇಳಿದೆ.
ಒಡಿಶಾ ಮಲ್ಕಾನ್ ಗಿರಿ ಜಿಲ್ಲೆಯಲ್ಲಿ 2019ರ ಅಕ್ಟೋಬರ್ನಲ್ಲಿ ನಡೆದ ಗುಂಡಿನ ದಾಳಿಯ ವೇಳೆ ಆರ್ ಕೆ ಗಾಯಗೊಂಡಿದ್ದು, ಈ ವೇಳೆ ನಡೆದ ಎನ್ಕೌಂಟರ್ನಲ್ಲಿ 30 ಮಂದಿ ಮೃತಪಟ್ಟಿದ್ದರು. ಆ ಸಮಯದಲ್ಲಿ ಆರ್ ಕೆ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು.
ಆರ್ ಕೆ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದವು. ಅಲ್ಲದೇ, ಆರ್ ಕೆ ಕುರಿತು ಮಾಹಿತಿ ನೀಡಿದವರಿಗೆ 97 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು.
ಆರ್ ಕೆ ಪೊಲೀಸರ ವಶದಲ್ಲಿದ್ದಾರೆ ಎಂದು ಮಾವೋವಾದಿ ಪರ ಸಹಾನುಭೂತಿ ಹೊಂದಿದ ಗುಂಪು ಹಾಗೂ ಮಾನವ ಹಕ್ಕು ಹೋರಾಟಗಾರರು ದೂರಿದ್ದರು. ಕೊನೆಗೆ ಆರ್ ಕೆ ಸುರಕ್ಷಿತವಾಗಿದ್ದಾರೆ ಎಂದು ಮಾವೋವಾದಿ ಸಂಘಟನೆ ಪ್ರಕಟಣೆ ಹೊರಡಿಸಿತ್ತು.