ಬೆಂಗಳೂರು, ಅ 15 (DaijiworldNews/MS): ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪೊಲೀಸರ ತನಿಖಾ ವರದಿ ಪಡೆಯಲು ಅವಕಾಶ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪೊಲೀಸರು ಯಾವುದೇ ಪ್ರಕರಣದ ತನಿಖೆಯ ಮಾಹಿತಿಯನ್ನು ತನಿಖಾ ಸಂದರ್ಭದಲ್ಲಿ ನೀಡಲು ನಿರ್ಬಂಧವಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರ ತನಿಖಾ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಬಹುದು ಎಂದು ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರ ಏಕ ಸದಸ್ಯ ನ್ಯಾಯಪೀಠ ಆದೇಶ ನೀಡಿದೆ.
ಪ್ರಕರಣವೊಂದರಲ್ಲಿ ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಸಿಐಡಿ ಮಾಹಿತಿ ಅಧಿಕಾರಿಯು ಮಾಹಿತಿ ಹಕ್ಕಿನಡಿ ಬಿ ರಿಪೋರ್ಟ್ ಪ್ರತಿ ನೀಡಲು ನಿರಾಕರಿಸಿದ್ದರು. ಆಗ ಮಾಹಿತಿ ನೀಡುವಂತೆ ರಾಜ್ಯ ಮಾಹಿತಿ ಆಯೋಗ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮಾಹಿತಿ ಅಧಿಕಾರಿ ರಿಟ್ ಅರ್ಜಿ ಸಲ್ಲಿಸಿದ್ದರು.ಇದೀಗ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯ ಮಾಹಿತಿ ಆಯುಕ್ತರ ಆದೇಶ ಎತ್ತಿಹಿಡಿದಿದೆ.