ತಿರುವನಂತಪುರಂ, ಅ.14 (DaijiworldNews/PY): ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ಅದಾನಿ ಗ್ರೂಪ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅದಾನಿ ಗ್ರೂಪ್, ಅಧಿಕೃತವಾಗಿ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಳ್ಳುವಿಕೆಯನ್ನು ಘೋಷಣೆ ಮಾಡಿದೆ.
ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್ಡಿಎಫ್ ಹಾಗೂ ವಿರೋಧ ಪಕ್ಷವಾದ ಯುಡಿಎಫ್ ಎರಡೂ ಖಾಸಗಿ ಉದ್ಯಮಿಗಳಿಗೆ ವಿಮಾನ ನಿಲ್ದಾಣದ ನಿರ್ವಹಣೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ತೀವ್ರ ವಿರೋಧಗಳ ನಡುವೆಯೂ ವಿಮಾನ ನಿಲ್ದಾಣದ ಆಡಳಿತವನ್ನು ಅದಾನಿ ಗ್ರೂಪ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಕಳೆದ ವರ್ಷ ಕೇರಳದ ಅಸೆಂಬ್ಲಿಯಲ್ಲಿ ವಿಮಾನ ನಿಲ್ದಾಣದ ಖಾಸಗೀಕರಣವನ್ನು ವಿರೋಧಿಸುವ ತೀರ್ಮಾನವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಕೇರಳ ಸಿಎಂ ಪಿಣರಾಯಿ ವಿಜಯನ್, ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ವಹಿಸಿಗೊಂಡಿರುವುದನ್ನು ಟೀಕಿಸಿದ್ದಾರೆ. ಇದು ಅಭಿವೃದ್ದಿಗಾಗಿ ಅಲ್ಲ, ಔದ್ಯಮಿಕ ಏಕಸ್ವಾಮ್ಯತೆಯನ್ನು ಸೃಷ್ಟಿಸಲು ಖಾಸಗೀಕರಣ ಮಾಡಲಾಗುತ್ತಿದೆ ಎಂದಿದ್ದರು.
1932ರಲ್ಲಿ ಕೇರಳದ ಮೊದಲ ವಿಮಾನ ನಿಲ್ದಾಣವಾಗಿರುವ ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದು, ಈ ವಿಮಾನ ನಿಲ್ದಾಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.