ಬೆಂಗಳೂರು, ಅ.14 (DaijiworldNews/PY): "ಸಲೀಂ, ಉಗ್ರಪ್ಪ ಮಾತುಕತೆ ವಿಚಾರವನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು" ಎಂದು ಸಂಸದ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನ ಕಮಲಾನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, "ಕಮಲಾನಗರದಲ್ಲಿ ಕಟ್ಟಡ ಕುಸಿದ ಮೊದಲು ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಇಲ್ಲದಿದ್ದಲ್ಲಿ ಅನಾಹುತ ಆಗುತ್ತಿತ್ತು. ಬಿಬಿಎಂಪಿ ಅಧಿಕಾರಿಗಳು ಕೇವಲ ನೋಟಿಸ್ ನೀಡುವುದಲ್ಲ. ಬದಲಾಗಿ ಇಂತಹ ಕಟ್ಟಡಗಳನ್ನು ಗುರುತಿಸಬೇಕು. ಈ ಬಗ್ಗೆ ಬಿಬಿಎಂಪಿ ಆಯುಕ್ತರೊಂದಿಗೆ ಮಾತನಾಡುತ್ತೇನೆ" ಎಂದಿದ್ದಾರೆ.
"ಈಗಾಗಲೇ ಕಾಂಗ್ರೆಸ್ ಅಧಃಪತನದತ್ತ ಸಾಗಿದೆ. ಪಕ್ಷದ ಕಚೇರಿಯಲ್ಲೇ ಅವರು ಈ ರೀತಿಯಾಗಿ ಮಾತನಾಡಿದ್ದಾರೆ. ಇದರ ಹಿಂದೆ ಯಾರಾದರೂ ಇರಲೇಬೇಕಲ್ಲವೇ?. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಅದು ಯಾರು ಎಂದು ತಿಳಿದುಕೊಳ್ಳಲಿ" ಎಂದು ಹೇಳಿದ್ದಾರೆ.
"ನನಗೆ ಅವರ ಪಕ್ಷದ ಆಂತರಿಕ ವಿಚಾರದ ಕುರಿತು ಮಾತನಾಡಲು ಇಷ್ಟವಿಲ್ಲ. ಪಕ್ಷದವರೇ ಡಿಕೆಶಿ ಅವರ ಬಗ್ಗೆ ಮಾತನಾಡುತ್ತಿರುವುದನ್ನು ಕಂಡರೆ ಪಕ್ಷದಲ್ಲೇ ಷಡ್ಯಂತ್ರ ಮಾಡುತ್ತಿರುವುದು ತಿಳಿಯುತ್ತದೆ. ಈಗಾಗಲೇ ಕಾಂಗ್ರೆಸ್ ಡಿಕೆಶಿ, ಸಿದ್ದರಾಮಯ್ಯ ಎಂದು ವಿಭಜನೆಯಾಗಿದೆ. ಇದಕ್ಕೆ ಪುರಾವೆಗಳು ಒಂದೊಂದಾಗಿ ಕಾಣಿಸುತ್ತಿವೆ" ಎಂದಿದ್ದಾರೆ.
ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದಲ್ಲಿ ವಾಸವಿದ್ದ 6 ಕುಟುಂಬಗಳಿಗೆ ತಲಾ 1 ಲಕ್ಷ ರೂ. ಅನ್ನು ಸದಾನಂದಗೌಡ ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ.