ನವದೆಹಲಿ, ಅ.14 (DaijiworldNews/PY): ಬಿಜೆಪಿ ಪಕ್ಷಕ್ಕೆ ಸಂಸದ ವರುಣ್ ಗಾಂಧಿ ಅವರು ಮತ್ತೆ ಮುಜುಗರ ಉಂಟಾಗುವಂತೆ ವರ್ತಿಸಿದ್ದು, 1980ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಮಾಜಿ ಪ್ರಧಾನಿ ವಾಜಪೇಯಿ ಅವರು ಮಾಡಿಕೊಂಡ ಮನವಿಯ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದಾರೆ.
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರೈತರಿಗೆ ನ್ಯಾಯ ಒದಗಿಸುವಂತೆ ವರುಣ್ ಗಾಂಧಿ ಆಗ್ರಹಿಸಿದ್ದು, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆದುಕೊಳ್ಳುವಂತೆ ಒತ್ತಾಯಿಸಿದ್ದು, ಈ ಮುಖೇನ ರೈತರ ವಿಚಾರದಲ್ಲಿ ತಮ್ಮ ನಿಲುವು ಬದಲಾಯಿಸುವುದಿಲ್ಲ ಎನ್ನುವ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.
ಕೃಷಿ ಕಾಯ್ದೆ ವಿರುದ್ದ ರೈತರು ಹೋರಾಟ ನಡೆಸುತ್ತಿರುವ ವೇಳೆ ವರುಣ್ ಗಾಂಧಿ ಅವರು ವಾಜಪೇಯಿ ಅವರ ಹೇಳಿಕೆಯ ತುಣುಕನ್ನು ಪೋಸ್ಟ್ ಮಾಡಿದ್ದು, "ವಿಶಾಲ ಹೃದಯದ ನಾಯಕನ ಬುದ್ಧಿವಂತ ಮಾತುಗಳು" ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ, "ಆಳುವ ಸರ್ಕಾರಗಳಿಂದ ರೈತರಿಗೆ ಯಾವುದೇ ರೀತಿಯಾದ ತೊಂದರೆಯಾದಲ್ಲಿ ನಾನು ರೈತರ ಪರ ನಿಲ್ಲುತ್ತೇನೆ. ರೈತರನ್ನು ಬೆದರಿಸುವ ಸರ್ಕಾರಕ್ಕೆ ಎಚ್ಚರಿಕೆ ನೀಡಿ. ರೈತರ ಚಳವಳಿಯನ್ನು ನಾವು ರಾಜಕೀಯಕ್ಕೆ ಬಳಸಿಕೊಳ್ಳಲು ಬಯಸುವುದಿಲ್ಲ. ರೈತರ ನಿಜವಾದ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ" ಎಂದು ವಾಜಪೇಯಿ ಅವರು ಹೇಳಿದ್ದರು.
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ಬೆಂಬಲವಾಗಿ ವರುಣ್ ಗಾಂಧಿ ಮಾತನಾಡಿದ್ದರು. ಮೃತ ರೈತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು.
ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯಲ್ಲಿ ಕಪ್ಪು ಎಸ್ಯುವಿ ಕಾರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹರಿಸಿದ ವಿಡಿಯೋ ಟ್ವೀಟ್ ಮಾಡಿದ್ದ ಅವರು, ಕೊಲೆ ಎಂಬುದಾಗಿ ಟ್ಯಾಗ್ ಮಾಡಿದ್ದರು. ಮನ ಕಲುಕುವಂತೆ ಮಾಡಲು ಈ ವಿಡಿಯೋ ಸಾಕು ಎಂದಿದ್ದರು.