ಲಕ್ನೋ, ಅ.14 (DaijiworldNews/PY): ಮಾಜಿ ಸಿಎಂ ಅಖಿಲೇಶ್ ಯಾದವ್, ಲಖಿಂಪುರ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, "ಶೀಘ್ರವೇ ನಕಲಿ ಬಾಬಾರನ್ನು ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ" ಎಂದಿದ್ದಾರೆ.
2022ರ ಚುನಾವಣೆಯ ಹಿನ್ನೆಲೆಯಲ್ಲಿ ಎಸ್ಪಿ ಪಕ್ಷದಿಂದ ಆಯೋಜಿಸಲಾಗಿದ್ದ ರಥಯಾತ್ರೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದ್ದು, ಸರ್ಕಾರವನ್ನು ಶೀಘ್ರದಲ್ಲೇ ಜನತೆ ಬದಲಾಯಿಸಲಿದ್ದಾರೆ" ಎಂದು ಹೇಳಿದ್ದಾರೆ.
"ರೈತರ ಮೇಲೆ ಬಿಜೆಪಿ ಕಾರ್ಯಕರ್ತರು ವಾಹನ ಹರಿಸಿ ಹತ್ಯೆ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿರುವುದು ಗೊಬ್ಬರ ಕಳ್ಳ ಸರ್ಕಾರವಾಗಿದೆ. ಬೆಲೆ ಏರಿಕೆ ಹಾಗೂ ಕೀಟನಾಶಕಗಳ ಬೆಲೆ ಏರಿಕೆ ಹಿಂದಿದೆ" ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಕಲಿ ಬಾಬಾ ಎಂದಿರುವ ಅಖಿಲೇಶ್, "ಶೀಘ್ರವೇ ನಕಲಿ ಬಾಬಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ" ಎಂದಿದ್ದಾರೆ.