ಬೆಂಗಳೂರು, ಅ.14 (DaijiworldNews/PY): "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ಅವರದ್ದೇ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಮಾಡುವಾಗ ಬಿಜೆಪಿ ನಾಯಕರ ಧ್ವನಿ ಎಲ್ಲಿ ಹೋಗಿತ್ತು?" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭ ಅವರದ್ದೇ ಪಕ್ಷದವರು ಮಾತನಾಡಿಲ್ಲವೇ?. ಬಿ ವೈ ವಿಜಯೇಂದ್ರ ಹಾಗೂ ಬಿಎಸ್ವೈ ಅವರ ವಿರುದ್ದ ಬಿಜೆಪಿ ನಾಯಕರಾದ ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪ ಮಾಡಿದ್ದರು. ಅಲ್ಲದೇ, ಸಿ ಪಿ ಯೋಗೀಶ್ವರ್ ಅವರು ಕೂಡಾ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ದರು. ರಮೇಶ್ ಜಾರಕಿಹೊಳಿ ಅವರು ಮಂಚದಲ್ಲೇ ಮಾತನಾಡಿದ್ದರು. ಆ ಸಂದರ್ಭ ಬಿಜೆಪಿ ನಾಯಕರ ಧ್ವನಿ ಎಲ್ಲಿ ಹೋಗಿತ್ತು?" ಎಂದು ಪ್ರಶ್ನಿಸಿದ್ದಾರೆ.
ಸಲೀಂ ಹಾಗೂ ಉಗ್ರಪ್ಪ ಉಚ್ಛಾಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರ್ಯಾರು ನನ್ನ ವಿರುದ್ದ ಏನು ಆರೋಪ ಮಾಡಬೇಕೋ ಮಾಡಿದ್ದಾರೆ. ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಿದವರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಇದು ನನ್ನ ವೈಯುಕ್ತಿಕ ವಿಚಾರವಲ್ಲ. ಪಕ್ಷದ ವಿಚಾರ" ಎಂದಿದ್ದಾರೆ.