ನವದೆಹಲಿ, ಅ.14 (DaijiworldNews/PY): "ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಏನಾದರೂ ಘಟನೆಗಳಾದರೆ ಮಾತ್ರವೇ ಏಕೆ ಎಲ್ಲೆಡೆ ಚರ್ಚೆಯಾಗುತ್ತದೆ?" ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಅಮೇರಿಕಾ ಪ್ರವಾಸದಲ್ಲಿರುವ ಅವರು ಹಾರ್ವರ್ಡ್ ಕೆನೆಡಿ ಸ್ಕೂಲ್ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಾಗಿರುವ ಘಟನೆ ಖಂಡನೀಯ. ಕೇಂದ್ರ ಸರ್ಕಾರ ಈ ಪ್ರಕರಣದ ಕುರಿತು ಮೌನವಾಗಿ ಕುಳಿತಿಲ್ಲ" ಎಂದಿದ್ದಾರೆ.
"ಭಾರತದ ಇತರ ರಾಜ್ಯಗಳಲ್ಲಿ ಈ ರೀತಿಯಾದ ಘಟನೆಗಳು ನಡೆದರೆ ಏಕೆ ಮೌನ ಕಂಡುಬರುತ್ತದೆ. ಆದರೆ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಏನಾದರೂ ಈ ರೀತಿಯಾದ ಘಟನೆಗಳು ನಡೆದರೆ ಎಲ್ಲೆಡೆ ಚರ್ಚೆಯಾಗುತ್ತದೆ. ನಾಲ್ವರು ರೈತರು ಹತ್ಯೆಯಾಗಿರುವ ಘಟನೆ ಖಂಡನೀಯ" ಎಂದು ಹೇಳಿದ್ದಾರೆ.
ದೇಶದಲ್ಲಿ ಕಲ್ಲಿದ್ದಲು ಕೊರತೆ ವಿಚಾರದ ಬಗ್ಗೆ ಮಾತನಾಡಿದ ಅವರು, "ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಈ ಕುರಿತು ಇರುವ ವರದಿಗಳು ಆಧಾರ ರಹಿತ. ದೇಶದಲ್ಲಿ ವಿದ್ಯುತ್ ಅಗತ್ಯಕ್ಕಿಂತ ಹೆಚ್ಚಿದೆ" ಎಂದು ತಿಳಿಸಿದ್ದಾರೆ.
"ವಿಶ್ವ ಬ್ಯಾಂಕ್ ಸೇರಿದಂತೆ ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಐಎಂಎಫ್ ಈ ಮೂರು ಸಂಸ್ಥೆಗಳು ನಿಜವಾಗಿ ಅಗತ್ಯವಿರುವ ರಾಷ್ಟ್ರಗಳ ಪರ ಮಾತನಾಡುವುದಿಲ್ಲ. ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೂಡಾ ಬದಲಾವಣೆಯಾಗುವುದು ಮುಖ್ಯ" ಎಂದು ಹೇಳಿದ್ದಾರೆ.