ಉತ್ತರಪ್ರದೇಶ, ಅ.14 (DaijiworldNews/PY): ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮೇಲೆ ಸಿಟ್ಟಾಗಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ತಾಲಬ್ಪುರ ಪ್ರದೇಶದ ನಿವಾಸಿ ಶಿಖಾ ಸೋನಿ (18) ಎಂದು ಗುರುತಿಸಲಾಗಿದೆ.
ಶಿಖಾ ಸೋನಿ ತನಗೆ ಪಿಜ್ಜಾ ಬೇಕು ಎಂದು ತಾಯಿಯ ಬಳಿ ಕೇಳಿದ್ದು, ಇದಕ್ಕೆ ಆಕೆಯ ತಾಯಿ ಪಿಜ್ಜಾ ಬೇಕು ಎಂದರೆ ಸ್ವಲ್ಪ ಸಮಯ ಕಾಯಬೇಕು ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಶಿಖಾ ತನ್ನ ಕೋಣೆಗೆ ತೆರಳಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತ ಶಿಖಾ ತಂದೆ ಮೋಹನ್ ಲಾಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಪುತ್ರಿ ನರ್ಸಿಂಗ್ ಕೋರ್ಸ್ ಅಭ್ಯಾಸ ಮಾಡುತ್ತಿದ್ದಳು. ಆಕೆ ಜಿಲ್ಲಾಸ್ಪತ್ರೆಯಲ್ಲಿ ಮೂರು ತಿಂಗಳ ತರಬೇತಿ ಪಡೆಯುತ್ತಿದ್ದಳು. ಶಿಖಾ ತಾಯಿಯ ಬಳಿ ಪಿಜ್ಜಾ ಬೇಕು ಎಂದು ಬೇಡಿಕೆ ಇಟ್ಟಿದ್ದು, ಅದಕ್ಕೆ ತಾಯಿ ಸ್ವಲ್ಪ ಸಮಯ ಕಾಯಬೇಕು ಎಂದು ಹೇಳಿದ್ದರು. ಈ ವಿಚಾರಕ್ಕೆ ಕೋಪಗೊಂಡ ಶಿಖಾ ತಕ್ಷಣವೇ ತನ್ನ ಕೋಣೆಗೆ ತೆರಳಿದ್ದಳು. ಆಕೆ ಎಷ್ಟೇ ಹೊತ್ತಾದರೂ ಕೋಣೆಯಿಂದ ಬರಲೇ ಇಲ್ಲ. ಬಳಿಕ ನಾವು ಕೋಣೆಯ ಬಾಗಿಲು ತೆಗೆದು ನೋಡಿದಾಗ ಆಕೆಯ ಶವವಾಗಿ ಪತ್ತೆಯಾಗಿದ್ದಳು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.