ಮುಂಬೈ, ಅ 14 (DaijiworldNews/MS): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ನಂತರ ಆತನ ಜೊತೆಗೆ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡು ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುಣೆ ನಗರ ಪೊಲೀಸರು ಕಿರಣ್ ಗೋಸವಿ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಿದ್ದಾರೆ.
ಆರ್ಯನ್ ಖಾನ್ ಜೊತೆ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡ ವ್ಯಕ್ತಿ ಕಿರಣ್ ಗೋಸವಿ ಆಗಿದ್ದು, ಈತ ಫರಾಸ್ಕಾನಾ ಪ್ರದೇಶದಲ್ಲಿ 2018 ರಲ್ಲಿ ದಾಖಲಾದ 3.09 ಲಕ್ಷ ವಂಚನೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದ ವ್ಯಕ್ತಿಯಾಗಿದ್ದು ಈ ಪ್ರಕರಣದಲ್ಲಿ ನಗರ ಪೊಲೀಸರು ಬುಧವಾರ ಲುಕೌಟ್ ನೋಟಿಸ್ ನೀಡಿದ್ದಾರೆ. 2018ರ ಮೇ 19ರಂದು ಮಲೇಷಿಯಾದಲ್ಲಿ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಎಸಗಿದ ಆರೋಪದ ಮೇಲೆ ಗೋಸವಿ ವಿರುದ್ಧ ಪುಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಅಕ್ಟೋಬರ್ 2ರಂದು ಮುಂಬೈ ತೀರದಲ್ಲಿ ಕ್ರೂಸ್ ಹಡಗಿನ ಮೇಲೆ ನಡೆದ ಎನ್ ಸಿಬಿ ದಾಳಿಯ ಸಾಕ್ಷಿದಾರ ಗೋಸವಿ ಆಗಿದ್ದು, ಆರ್ಯನ್ ಖಾನ್ ಬಂಧನ ನಂತರ ಆತ ಎನ್ ಸಿಬಿ ಕಚೇರಿಯಲ್ಲಿ ಏಕೆ ಇದ್ದ ಎಂದು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಎನ್ ಸಿಪಿ ನಾಯಕ ನವಾಬ್ ಮಲಿಕ್ ಪ್ರಶ್ನಿಸಿದ್ದರು. ಈ ಮಧ್ಯೆ ಈಗಾಗಲೇ ಸ್ಪಷ್ಟನೆ ನೀಡಿರುವ ಎನ್ ಸಿಬಿ, ಗೋಸವಿ ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ಅಧಿಕಾರಿಯೂ ಅಲ್ಲ ಎಂದು ಹೇಳಿದೆ. ಕ್ರೂಸ್ ಡ್ರಗ್ ಪ್ರಕರಣದಲ್ಲಿ ಎನ್ಸಿಬಿ ಆತನನ್ನು "ಸ್ವತಂತ್ರ ಸಾಕ್ಷಿ" ಎಂದು ಹೇಳಿದೆ.