ಬೆಂಗಳೂರು, ಅ.14 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನನಗೆ ಗಾಡ್ ಫಾದರ್, ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ನಲ್ಲಿ ಇರುತ್ತೇನೆ" ಎಂದು ಕಾಂಗ್ರೆಸ್ ನಾಯಕ ಸಲೀಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ನಿನ್ನೆ ನಡೆದ ಘಟನೆಯಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಮುಖ ತೋರಿಸಲೂ ಕೂಡಾ ಮುಜುಗರವಾಗುತ್ತಿದೆ. ನಾನು ಡಿಕೆಶಿ ಅವರ ಬಳಿ ಕೈ ಮುಗಿದು ಕ್ಷಮೆ ಕೋರುತ್ತೇನೆ" ಎಂದಿದ್ದಾರೆ.
"ನೀರಾವರಿ ಇಲಾಖೆಯಲ್ಲಿ ನಡೆದ ನೂರಾರು ಕೋಟಿ ಅವ್ಯವಹಾರದ ಕುರಿತು ಮಾತನಾಡುತ್ತಿದ್ದೆವು. ಬಿ ವೈ ವಿಜಯೇಂದ್ರ ಅವರ ಬಗ್ಗೆ ನಾನು ಮಾತನಾಡಿದ್ದೆ. ಇವೆಲ್ಲವೂ ನಾನು ಮಾತನಾಡಿದ ಮಾತಿನ ಮುಂದಿನ ಭಾಗದಲ್ಲಿದ್ದು, ಅರ್ಧ ಮಾತ್ರವೇ ತೋರಿಸಲಾಗಿದೆ. ಡಿಕೆಶಿ ಅವರ ಐಟಿ ದಾಳಿಯ ಬಗ್ಗೆ ನಾನೇ ಹೋರಾಟ ಮಾಡಿದ್ದೆ. ಡಿಕೆಶಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿಲ್ಲ. ನನಗೆ ಡಿಕೆಶಿ ಅವರಿಗೆ ಮುಖ ತೋರಿಸಲು ಮುಜುಗರವಾಗುತ್ತಿದೆ" ಎಂದು ತಿಳಿಸಿದ್ದಾರೆ.
"ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ನಲ್ಲಿ ಇರುತ್ತೇನೆ. ನಾನು ಕೆಪಿಸಿಸಿ ಸದಸ್ಯ ಕೂಡಾ ಹೌದು. ಆದರೆ, ನನ್ನನ್ನು ಉಚ್ಛಾಟನೆ ಮಾಡಿರುವುದ ನನಗೆ ನೋವಾಗಿದೆ" ಎಂದು ಹೇಳಿದ್ದಾರೆ.