ನವದೆಹಲಿ, ಅ.14 (DaijiworldNews/PY): "ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಯಾವುದೇ ರೀತಿಯಾದ ಯೋಚನೆ ಹೊಂದಿಲ್ಲ" ಎಂದು ನೀತಿ ಆಯೋಗ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಭಾರತ 100 ಕೋಟಿ ಲಸಿಕೆ ನೀಡಿಕೆಯತ್ತ ಸಾಗುತ್ತಿದೆ. ಲಸಿಕೆ ಉತ್ಪಾದನೆಯನ್ನು ಕೂಡಾ ಹೆಚ್ಚಿಸಲಾಗಿದೆ. ಈ ಹಿನ್ನೆಲೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಯಾವುದೇ ಯೋಚನೆ ಇಲ್ಲ" ಎಂದು ಸರ್ಕಾರದ ಮುಖ್ಯ ಕೊರೊನಾ ಸಲಹೆಗಾರ ಡಾ. ವಿನೋದ್ ಕೆ. ಪಾಲ್ ಹೇಳಿದ್ದಾರೆ.
ಜಾಗತಿಕವಾಗಿ ಇಸ್ರೇಲ್ ಸೇರಿದಂತೆ ಜರ್ಮನಿ, ಇಟಲಿ, ಫ್ರಾನ್ಸ್ ಹಾಗೂ 15ಕ್ಕೂ ಹೆಚ್ಚಿನ ರಾಷ್ಟ್ರಗಳು ಹಿರಿಯ ನಾಗರಿಕರಿಗೆ ಕೊರೊನಾ ನಿಯಂತ್ರಣಕ್ಕಾಗಿ ಮೂರನೇ ಡೋಸ್ ಲಸಿಕೆ ನೀಡಲು ಆರಂಭಿಸಿವೆ.
"ಆದರೆ, ಮೂರನೇ ಡೋಸ್ ಲಸಿಕೆ ನೀಡುವ ಬಗ್ಗೆ ಯಾವುದೇ ಸ್ಪಷ್ಟ ಅಧಿಸೂಚನೆ ಲಭ್ಯವಾಗಿಲ್ಲ. ಈ ಹಿನ್ನೆಲೆ ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಯಾವುದೇ ಯೋಚನೆ ಇಲ್ಲ" ಎಂದು ನೀತಿ ಆಯೋಗ ಹೇಳಿದೆ.
"ಸದ್ಯ, ದೇಶಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿದ್ದು, ಇಲ್ಲಿ ಬಳಕೆಗೆ ಲಭ್ಯವಾದ ಬಳಿಕ, ಮುಂದಿನ ವರ್ಷದಿಂದ ರಫ್ತು ಮಾಡುವ ಗುರಿ ಇದೆ" ಎಂದು ವಿನೋದ್ ಮಾಹಿತಿ ನೀಡಿದ್ದಾರೆ.