ಶ್ರೀನಗರ, ಅ.14 (DaijiworldNews/PY): "ನನ್ನನ್ನು ಹತ್ಯೆ ಮಾಡಿದರೂ ಕೂಡಾ ಕಾಶ್ಮೀರ ಭಾರತದ ಭಾಗವೇ ಆಗಿದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬಿಟ್ಟುಕೊಡುವುದಿಲ್ಲ" ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಸಿಖ್ಖರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಾಶ್ಮೀರ ಸದಾ ಭಾರತದ ಭಾಗವಾಗಿಯೇ ಉಳಿಯಲಿದೆ. ನನ್ನನ್ನು ಹತ್ಯೆ ಮಾಡಿದರೂ ಇದು ಬದಲಾಗುವುದಿಲ್ಲ" ಎಂದಿದ್ದಾರೆ.
"ನಾವೂ ಕೂಡಾ ಭಾರತದ ಭಾಗವೇ ಆಗಿದ್ದು, ಭಾರತದೊಂದಿಗೆ ಉಳಿಯಲಿದ್ದೇವೆ. ಏನೇ ಬಂದರೂ ಕೂಡಾ ನಾವು ಭಾರತದ ಭಾಗವಾಗಿರಬೇಕು. ಅವರು ನಮ್ಮನ್ನು ಕೊಂದರೂ ಈ ತೀರ್ಮಾನವನ್ನು ಬದಲಾಯಿಸಬಾರದು" ಎಂದು ಹೇಳಿದ್ದಾರೆ.
"ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಸಾವಿಗೆ ಕಂಬನಿ ಮಿಡಿದ ಅವರು, ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನನ್ನು ಹತ್ಯೆ ಮಾಡಿರುವುದು ಇಸ್ಲಾಂನ ಸೇವೆ ಅಲ್ಲ. ದೇಶಾದ್ಯಂತ ದ್ವೇಷದ ಬಿರುಗಾಳಿ ತಿರುಗುತ್ತಿದ್ದು, ಮುಸ್ಲಿಂಮರು, ಹಿಂದೂಗಳು ಹಾಗೂ ಸಿಖ್ಖರ ಸಮುದಾಯಗಳನ್ನು ಒಡೆಯಲಾಗುತ್ತಿದೆ" ಎಂದಿದ್ದಾರೆ.
"ಭಾರತವನ್ನು ಒಡೆಯುವ ರಾಜಕಾರಣವನ್ನು ನಾವು ತಡೆಯಬೇಕಿದೆ. ನಾವೆಲ್ಲರೂ ಒಂದಾಗಿ ಬದುಕಿದಾಗ ಮಾತ್ರವೇ ನಮ್ಮ ದೇಶವನ್ನು ಉಳಿಸಲು ಸಾಧ್ಯ. 1990ರ ದಶಕದಲ್ಲಿ ಎಲ್ಲರೂ ಕಾಶ್ಮೀರ ತೊರೆದ ಸಂದರ್ಭ ಸಿಖ್ಖರು ಮಾತ್ರವೇ ಉಳಿದುಕೊಂಡರು. ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ" ಎಂದು ಹೇಳಿದ್ದಾರೆ.