ಇಂದೋರ್, ಅ.14 (DaijiworldNews/PY): ದಲಿತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಹೇಳಲಾದ ತಮ್ಮ ಪಕ್ಷದ ಆಡಳಿತವಿರುವ ರಾಜಸ್ತಾನಕ್ಕೆ ಭೇಟಿ ನೀಡುವಂತೆ ಇಂದೋರ್ನಲ್ಲಿರುವ ಬಿಜೆಪಿ ನಾಯಕರು ಬುಧವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ವಿಮಾನ ಟಿಕೆಟ್ ಕಳುಹಿಸಿದ್ದಾರೆ.
ತಮ್ಮ ಪಕ್ಷದ ಆಡಳಿತವಿರುವ ರಾಜಸ್ಥಾನಕ್ಕೆ ಭೇಟಿ ನೀಡುವಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ವಿಮಾನ ಟಿಕೆಟ್ಗಳನ್ನು ಕಳುಹಿಸಿದ್ದಾರೆ.
ಉತ್ತರಪ್ರದೇಶದಲ್ಲಿ ನೆಹರೂ ಕುಟುಂಬದ ಇಬ್ಬರೂ ರಾಜಕೀಯ ಪ್ರವಾಸದಲ್ಲಿ ತೊಡಗಿದ್ದಾರೆ. ಅಲ್ಲಿ ಅವರು ಲಖಿಂಪುರ್ ಖೇರಿಯಲ್ಲಿ ಹಿಂಸಾಚಾದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಆದರೆ, ಅವರಿಗೆ ರಾಜಸ್ಥಾನದಲ್ಲಿ ದಲಿತರಿಗೆ ಏನಾಗುತ್ತಿದೆ ಎನ್ನುವುದನ್ನು ನೋಡಲು ಸಮಯ ಇಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
"ನಾವು ನಿಧಿಯನ್ನು ಸಂಗ್ರಹಿಸಿದ್ದು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ದೆಹಲಿ-ಜೈಪುರ ವಿಮಾನ ಟಿಕೆಟ್ಗಳನ್ನು ಕಳುಹಿಸಿದ್ದೇವೆ. ಇದರಿಂದ ಅವರು ರಾಜಸ್ತಾನದಲ್ಲಿ ದಮನಕ್ಕೊಳಗಾದ ದಲಿತ ಸಮುದಾಯದವರನ್ನು ಭೇಟಿ ಮಾಡಬಹುದು" ಎಂದು ಇಂದೋರ್ ಜಿಲ್ಲಾ ಬಿಜೆಪಿ ಮುಖ್ಯಸ್ಥ ರಾಜೇಶ್ ಸೋಂಕರ್ ತಿಳಿಸಿದ್ದಾರೆ.