ಲಕ್ನೋ ಅ 14 (DaijiworldNews/MS): ಲಖಿಂಪುರ ಖೇರಿ ಜಿಲ್ಲೆಯಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಆಶಿಶ್ ಮಿಶ್ರಾ ಮತ್ತು ಆಶಿಶ್ ಪಾಂಡೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾ. ಚಿಂತಾ ರಾಮ್ ತಿರಸ್ಕರಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಎಸ್ಪಿ ಯಾದವ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಎಸ್ಐಟಿ ಬಂಧಿಸಿದೆ. 38 ವರ್ಷದ ಅಂಕಿತ್ ದಾಸ್ ಮತ್ತು 37 ವರ್ಷದ ಲತೀಫ್ ಯಾನೆ ಕಾಲ ಬಂಧನಕ್ಕೆ ಒಳಪಟ್ಟ ಮತ್ತಿಬ್ಬರು ಆರೋಪಿಗಳು. ಈವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ
ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಳೆದ ವಾರ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಅಜಯ್ ಮಿಶ್ರಾ ಅವರ ಬೆಂಗಾವಲಿನ ಭಾಗವಾಗಿದ್ದ ವಾಹನವು ಪ್ರತಿಭಟನಾಕಾರರ ಮೇಲೆ ಹರಿದಿದೆ ಎಂದು ರೈತ ಸಂಘಟನೆಗಳು ಆರೋಪಿಸಿತ್ತು.
ಈ ಪ್ರಕರಣದಲ್ಲಿ ಮಿಶ್ರಾ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಅಪರಾಧಗಳನ್ನು ಹೊರಿಸಲಾಗಿದೆ.