ಬಿಡದಿ, ಅ 13 (DaijiworldNews/MS): ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ , ಮುಖಂಡರಾದ ಸಿದ್ದರಾಮಯ್ಯ ಅವರೇ ಆ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ' ಈ ಹಿಂದೆ ಜೆಡಿಎಸ್ನಲ್ಲಿ ಇದ್ದುಕೊಂಡೇ ಜೆಡಿಎಸ್ ಅನ್ನೇ ಮುಗಿಸಲು ಹೊರಟಿದ್ದರು. ಅಂದು ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿನ ಮುಖಂಡರನ್ನು ಸೇರಿಸಿಕೊಂಡು "ಅಹಿಂದ" ಎಂಬ ಸಂಘಟನೆ ಮಾಡಿದ್ದರು. ಇದೀಗ ಅದೇ ಹಳೆಯ ಕೆಲಸ ಮುಂದುವರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಬುಡಕ್ಕೆ ಬೆಂಕಿ ಇಡುವುದು ಖಚಿತ ಎಂದು ಆರೋಪಿಸಿದ್ದಾರೆ.
ಚರ್ಚೆಗೆ ಬರುತ್ತಾರೆಯೇ ಎಂಬ ಸಿದ್ದರಾಮಯ್ಯ ಅವರ ಸವಾಲನ್ನು ನಾನು ಸ್ವೀಕರಿಸಲು ತಯಾರಿದ್ದೇನೆ . ನನ್ನ ತಂದೆ ನನಗೂ ರಾಜಕೀಯ ಕಳುಹಿಸಿದ್ದಾರೆ. ಪಲಾಯನ ಮಾಡುವುದಿಲ್ಲ. ನೀವು ಈ ಚರ್ಚೆಗೆ ಮಂಗಳ ಹಾಡಿದರೆ ನಾನೂ ಸುಮ್ಮನಿರುತ್ತೇನೆ. ಇಲ್ಲವಾದರೆ ಮಾತನಾಡಲು ನನಗೂ ಬಹಳಷ್ಟು ವಿಷಯಗಳಿವೆ' ಎಂದರು.
ಡಿ.ಕೆ. ಶಿವಕುಮಾರ್ ಕುರಿತು ಉಗ್ರಪ್ಪ- ಸಲೀಂ ಮಾತನಾಡಿರುವ ವಿಡಿಯೊ ವೈರಲ್ ವಿಚಾರವಾಗಿ ಹೇಳಿಕೆ ಆಡಿಯೊ ಬಗ್ಗೆ ಪ್ರಸ್ತಾಪಿಸಿದ ಅವರು 'ಸಿದ್ದರಾಮಯ್ಯ ಶಿಷ್ಯರೇ ಈ ಬಗ್ಗೆ ಮಾತನಾಡಿದ್ದು, ಇದರ ಹಿಂದೆ ಯಾವ ಉದ್ದೇಶ ಇದೆಯೋ ಗೊತ್ತಿಲ್ಲ. ಶಿವಕುಮಾರ್ ಒಮ್ಮೆಯಾದರೂ ಮುಖ್ಯಮಂತ್ರಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಅವರನ್ನು ಮನೆಗೆ ಕಳುಹಿಸಿಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪಿಸಿದರು.