ಬೆಂಗಳೂರು, ಅ.13 (DaijiworldNews/HR): ಕಾಂಗ್ರೆಸ್ ನಾಯಕರಾದ ಸಲೀಂ ಮತ್ತು ವಿ ಎಸ್ ಉಗ್ರಪ್ಪನವರ ಸಂಭಾಷಣೆಗಳಿಗೂ ನನಗೂ ಸಂಬಂಧವಿಲ್ಲ, ಇದರ ಬಗ್ಗೆ ಪಕ್ಷದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ವಿಡಿಯೋವೊಂದರಲ್ಲಿ ಪ್ರತಿಕ್ರಿಯಿಸಿರುವ ಅವರು, "ಸಲೀಂ ಮತ್ತು ಉಗ್ರಪ್ಪನವರ ಸಂಭಾಷಣೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ನನಗೆ ಮುಜುಗರವಾಗಿದೆ. ನಾನು ಪಕ್ಷದಲ್ಲಿ ಅಶಿಸ್ತು, ಗುಂಪುಗಾರಿಕೆಯನ್ನು ಸಹಿಸುವುದಿಲ್ಲ, ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ" ಎಂದರು.
ಇನ್ನು "ನಾನು ಯಾವ ಪರ್ಸೆಂಟೇಜ್, ಭ್ರಷ್ಟಾಚಾರಕ್ಕೂ ಭಾಗಿಯಾಗಿಲ್ಲ. ರಾಜಕಾರಣದಲ್ಲಿ ಹಾರ ಹಾಕಿ ಸನ್ಮಾನ ಮಾಡುವವರಿರುತ್ತಾರೆ, ಹೊಗಳುವವರು, ತೆಗಳುವವರು, ಜೈಕಾರ ಹಾಕುವವರು, ಇಲ್ಲಿ ಕಲ್ಲು, ಚಪ್ಪಲಿ, ಮೊಟ್ಟೆ ಎಸೆಯುವವರೂ ಇರುತ್ತಾರೆ, ನಾವು ರಾಜಕಾರಣದಲ್ಲಿ ಎಲ್ಲವನ್ನೂ ಸ್ವೀಕರಿಸಲು ಸಿದ್ಧರಾಗಿರಬೇಕು" ಎಂದಿದ್ದಾರೆ.
ಈ ಇಬ್ಬರು ನಾಯಕರು ಮಾತನಾಡಿಕೊಂಡಿರುವುದು ಆಂತರಿಕ, ಬಹಿರಂಗವಾಗಿ ಹೇಳಿರುವ ಮಾತಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ, ಆದರೆ ಶಿಸ್ತು ಪಾಲನಾ ಸಮಿತಿ ಕ್ರಮ ತೆಗೆದುಕೊಳ್ಳುತ್ತದೆ" ಎಂದರು.