ಚಿತ್ರದುರ್ಗ, ಅ.13 (DaijiworldNews/HR): ಕಾಂಗ್ರೆಸ್ ನಾಯಕರಾದ ಸಲೀಂ, ಉಗ್ರಪ್ಪ ಅವರು ಭ್ರಷ್ಟಾಚಾರದ ಬಗ್ಗೆ ಇಷ್ಟು ದಿನ ಮುಚ್ಚಿಟ್ಟದ್ದೇಕೆ ಅನ್ನುವುದನ್ನು ಬಿಚ್ಚಿ ಹೇಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರು ಸತ್ಯಾಸತ್ಯತೆಯನ್ನು ತಡವಾಗಿಯಾದರೂ ಬಾಯಿ ಬಿಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಜಗಳ ಇದ್ದು, ಡಿ.ಕೆ.ಶಿವಕುಮಾರ್ ಅವರನ್ನು ಕಂಡರೆ ಬೇರೆಯವರಿಗೆ ಆಗುವುದಿಲ್ಲ" ಎಂದರು.
ಇನ್ನು "2013ರಿಂದ 18ರವರೆಗೆ ಅಧಿಕಾರಿಗಳು, ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಗಳು , ರೈತರ ಆತ್ಮಹತ್ಯೆಗಳು ನಡೆದಿದ್ದು, ಯಾರ ಕಾಲದಲ್ಲಿ ಹೆಚ್ಚು ಕೊಲೆ, ಆತ್ಮಹತ್ಯೆ ನಡೆದದ್ದು ಎನ್ನುವುದನ್ನು ಸಿದ್ಧರಾಮಯ್ಯ ನೆನಪಿಸಿಕೊಳ್ಳಲಿ" ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಯೇ ನಡೆದ ಸಭೆ ವೇಳೆ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಡಿ.ಕೆ.ಶಿವಕುಮಾರ್ ಬಗ್ಗೆ ಚರ್ಚೆ ನಡೆಸಿದ್ದು, ಡಿಕೆಶಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿದ್ದರಾಮಯ್ಯ ಖಡಕ್ ವ್ಯಕ್ತಿಯಂದು ಹೊಗಳಿದ್ದರು. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. 6-8 ಪರ್ಸೆಂಟ್ ಇರುವುದನ್ನು 12 ಪರ್ಸೆಂಟ್ ಮಾಡಿದ್ದಾರೆ. ಕೋಟಿ ಕೋಟಿ ಡೀಲ್ ಮಾಡುತ್ತಾರೆ ಎಂದು ಸಲೀಂ ಹೇಳಿದ್ದು,ಇದಕ್ಕೆ ಉಗ್ರಪ್ಪ ಪ್ರತಿಕ್ರಿಯಿಸಿ ನಾವೆಲ್ಲ ಪಟ್ಟು ಹಿಡಿದು ಡಿಕೆಶಿಯನ್ನು ಅಧ್ಯಕ್ಷರನ್ನಾಗಿ ಮಾಡಿದೆವು ಈಗ ನಮ್ಮ ಬುಡಕ್ಕೆ ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಇವರಿಬ್ಬರು ಗುಸುಗುಸು ಮಾತಿನ ವಿಡಿಯೋ ಸಖತ್ ವೈರಲ್ ಆಗುತ್ತಿದೆ.