ಬೆಂಗಳೂರು, ಅ 13 (DaijiworldNews/MS): ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಕಾಂಗ್ರೆಸ್ ವಕ್ತಾರ ಸಲಿಂ ಇವರಿಬ್ಬರೂ ಸಂಭಾಷಣೆ ನಡೆಸುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಕಾಂಗ್ರೆಸ್ ಗೆ ಕಂಟಕವಾಗಿ ಪರಿಣಮಿಸಿದೆ. ಪತ್ರಿಕಾಗೋಷ್ಠಿಗೆಂದು ಕಾಯ್ದಿರಿಸಿದ ಮೈಕ್ಗಳಲ್ಲಿ ಇಬ್ಬರ ಧ್ವನಿ ದಾಖಲಾಗಿ ವೈರಲ್ ಆಗಿದ್ದು, ಇದು ಬಿಜೆಪಿಗೆ ಪ್ರಬಲ ಅಸ್ತ್ರವಾಘಿ ಪರಿಣಮಿಸಿದೆ.
ಇದೇ ವಿಚಾರವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದು, "ತಕ್ಕಡಿ ಮೇಲೆಳುತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಗುಟ್ಟಾಗಿ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಡಿ.ಕೆ ಶಿವಕುಮಾರ್ , ರಾಜ್ಯಾಧ್ಯಕ್ಷರಾಗಿ ಇದ್ದರೆ ಪಕ್ಷ ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ಸಿಗರು ಹೇಳಿರುವುದು ತಡವಾಗಿಯಾದರೂ ಜ್ಞಾನೋದಯವಾದಂತಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಅವರ ಬಗ್ಗೆ ಅವರ ಪಕ್ಷದವರೇ ಹೇಳಿರುವ ಮಾತುಗಳನ್ನು ರಾಜ್ಯದ ಜನ ಕೇಳುತ್ತಿದ್ದಾರೆ. ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರಿಬ್ಬರ ನಡುವೆ ನಡೆದ ಗುಸುಗುಸು ಮಾತು ಬಹಿರಂಗವಾಗಿ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷವೇ ಮತ್ತೆ ಸಂಕಟಕ್ಕೆ ಸಿಲುಕಿದೆ. ಕಳೆದ ಬಾರಿ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ವೇಳೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮಾಧ್ಯಮಗಳ ಮೈಕ್ಗಳ ಮುಂದೆ ಕುಳಿತು ಅರಿವಿಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರರ ಬಗ್ಗೆ ಮಾತನಾಡಿದ್ದು ವೈರಲ್ ಆಗಿತ್ತು. ಅದರ ಪರಿಣಾಮ ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಅಸ್ತ್ರ ಸಿಕ್ಕು ಕಾಂಗ್ರೆಸ್ಗೆ ಮುಳುವಾಗಿತ್ತು.ಈಗ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವವರಿದ್ದರು. ಅದಕ್ಕೂ ಮುನ್ನಾ ಕಾಂಗ್ರೆಸ್ ವಕ್ತಾರ ಸಲಿಂ ಮತ್ತು ಉಗ್ರಪ್ಪ ಪರಸ್ಪರ ಮಾತನಾಡಿಕೊಂಡಿದ್ದಾರೆ. ಈ ಮಾತುಗಳು ಇಂದು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭ್ರಷ್ಟ ಎಂಬಂತೆ ಟೀಕಿಸಲಾಗಿದೆ. ಸ್ವಪಕ್ಷೀಯರೇ ಈ ರೀತಿ ಮಾತನಾಡಿರುವುದರಿಂದ ಆಡಳಿತ ಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರ ಸಿಕ್ಕಿದಂತಾಗಿದೆ.