ಬೆಂಗಳೂರು, ಅ.13 (DaijiworldNews/HR): ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರು ಇತ್ತೀಚೆಗೆ ಭೇಟಿಯಾಗಿದ್ದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಬಿಎಸ್ವೈ, "ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ, ಹಾಗೆ ಭೇಟಿ ಮಾಡುವ ಅಗತ್ಯವೂ ನನಗಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದರು.
ಇನ್ನು "ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಗುರಿ ತಲುಪುವ ತನಕ ನಾನು ವಿಶ್ರಮಿಸುವುದಿಲ್ಲ. ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ, ಆಗುವುದೂ ಇಲ್ಲ. ಹಾಗೆಯೇ ಸಿದ್ದರಾಮಯ್ಯನವರು ಕೂಡ ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಅರ್ಥರಹಿತವಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.