ಬೆಂಗಳೂರು, ಅ 13 (DaijiworldNews/MS): ರಾಜ್ಯ ರಾಜಕಾರಣದಲ್ಲಿ ಪರ್ಸಂಟೇಜ್ ಕೋಲಾಹಲ ಎಬ್ಬಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಪರ್ಸಂಟೇಜ್ ಆರೋಪದ ಮಾಡಿದ್ದ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಕಾಂಗ್ರೆಸ್ ಪಕ್ಷವೂ ಅಮಾನತು ಮಾಡಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ " ಅಧಾರ ರಹಿತವಾಗಿ ಮಾತನಾಡಿದ ಸಲೀಂ ಅವರನ್ನು ಅಮಾನತು ಮಾಡಿದ್ದೇವೆ. ಆದರೆ ಯತ್ನಾಳ್, ವಿಶ್ವನಾಥ್, ಸುರೇಶ್ ಗೌಡ ಅವರುಗಳು ತಮ್ಮದೇ ಸರ್ಕಾರದ ವಿರುದ್ಧದ ಆರೋಪಗಳಿಗೆ ಬಿಜೆಪಿ ಪಕ್ಷವೂ ಯಾವುದೇ ಕ್ರಮ ಕೈಗೊಳ್ಳದಿರುವುದು ತಮ್ಮ ಸರ್ಕಾರದ ಭ್ರಷ್ಟಾಚಾರವನ್ನ ಒಪ್ಪಿಕೊಂಡಂತಾಗಿದೆ.
ಅವರ ಆರೋಪಗಳಿಗೆ ಬಿಜೆಪಿ ಉತ್ತರಿಸಬೇಕಿದೆ ಎಂದು ಹೇಳಿದೆ.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದ್ದು . ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹೇಳಿರುವ ವಿಚಾರ ವೈರಲ್ ಆಗಿತ್ತು. ಶಿವಮೊಗ್ಗದ ಸಾಗರ ಮೂಲದ ಸಲೀಂ. ಕಳೆದ 15 ವರ್ಷಗಳಿಂದ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.