ಬೆಂಗಳೂರು, ಅ 13 (DaijiworldNews/MS): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ವೇಳೆ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದನ್ನುಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರನ್ನು ಭೇಟಿ ಮಾಡಿಯೇ ಇಲ್ಲ. ಅವರ 76ನೇ ಜನ್ಮದಿನದಂದು ಮಾತ್ರ ನಾನು ಖುದ್ದಾಗಿ ಭೇಟಿ ಮಾಡಿದ್ದೇನೆ. ಆ ಬಳಿಕ ಸದನದಲ್ಲಿ ಹಲವಾರು ಬಾರಿ ಮುಖಾಮುಖಿಯಾಗಿದ್ದೇವೆ. ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದವರ ಮನೆ, ಕಚೇರಿಗೆ ಹೋಗಿಲ್ಲ. ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾರ ಮನೆಗೂ ಹೋಗಿಲ್ಲ. ಕುಮಾರಸ್ವಾಮಿ ಹಾಗೆ ಭೇಟಿ ಮಾಡುವ ಗಿರಾಕಿ ಎಂದು ವ್ಯಂಗ್ಯವಾಡಿದರು.
ಮುಂದುವರಿಸಿ ಮಾತನಾಡಿದ ಅವರು, ಅದರೂ ನನ್ನ-ಯಡಿಯುರಪ್ಪ ಭೇಟಿಯ ದಾಖಲೆಗಳು ಕುಮಾರಸ್ವಾಮಿ ಬಳಿ ಇದ್ದಾರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು
ಯಡಿಯೂರಪ್ಪ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗೆ ನನ್ನ ಭೇಟಿ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದರೆ, ಸರ್ಕಾರ ನಡೆಸುವರ್ಯಾರು? ಮೋದಿ, ಯಡಿಯೂರಪ್ಪ ಮತ್ತು ಐಟಿ ದಾಳಿಗೊಳಗಾದ ಆಪ್ತರು ನಮ್ಮ ಪಕ್ಷದವರಾ ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೆಡವಿದೆ ಎನ್ನುತ್ತಾರಲ್ಲಜೆಡಿಎಸ್ ನ ಮೂವರೂ ಶಾಸಕರೂ ಬಿಜೆಪಿಗೆ ಹೋದರಲ್ಲ. ಅದರ ಬಗ್ಗೆ ಏನು ಹೇಳುತ್ತಾರೆ? ಅವರನ್ನೂ ನಾನೇ ಬಿಜೆಪಿಗೆ ಕಳಿಸಿದೆನಾ? ಎಂದು ಪ್ರಶ್ನಿಸಿದರು.