ಬೆಂಗಳೂರು, ಅ.13 (DaijiworldNews/HR): ಮುಖ್ಯಮಂತ್ರಿಯಾಗುವ ಡಿ.ಕೆ ಶಿವಕುಮಾರ್ ಅವರ ಕನಸಿಗೆ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ಬಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ "ಡಿಕೆಶಿ ಪದಚ್ಯುತಿ" ಎಂಬ ಮಾಸ್ಟರ್ ಪ್ಲ್ಯಾನ್ನ ಭಾಗವೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್. ಉಗ್ರಪ್ಪ, ಸಲೀಂ ಗುಸುಗುಸು ಮಾತುಕತೆ ನಡೆಸಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಪ್ರಸ್ನಿಸಿದೆ.
ಇನ್ನು ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ತವರು ಮನೆಯಾಗಿದೆ" ಎಂದು ಹೇಳಿದೆ.