ಕಲಬುರಗಿ,ಅ.13 (DaijiworldNews/HR): ಪುಟಗೋಸಿ ವಿಪಕ್ಷ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ತೆಗೆದರು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ದೇವೇಗೌಡರು ವಿಪಕ್ಷ ನಾಯಕನಾಗಿದ್ದರು ಹಾಗಾದರೆ ಅದುಕೂಡ ಪುಟಗೋಸಿನಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಹೆಚ್ ಡಿ ಕುಮಾರಸ್ವಾಮಿಯವರೇ ಕಾರಣ. ನನ್ನ ವಿರುದ್ಧ ಕುಮಾರಸ್ವಾಮಿ ಮಾತನಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ಕುಮಾರಸ್ವಾಮಿಯವರಿಗೆ ಎರಡು ನಾಲಿಗೆಯಿದೆಯೇ, ಮೈತ್ರಿ ಸರ್ಕಾರ ರಚನೆಯಾಗುವುದು ಬೇಡ ಎಂದಿದ್ದರೆ ಅವರೇಗೆ ಮುಖ್ಯಮಂತ್ರಿಯಾಗುತ್ತಿದ್ದರು, ಮೈತ್ರಿ ಸರ್ಕಾರ ಬೀಳಿಸಬೇಕೆಂದಿದ್ದರೆ ಅವರು ಸಿಎಂ ಆಗುವುದಕ್ಕೆ ನಾನು ಒಪ್ಪಿಗೆ ನೀಡುತ್ತಿರಲಿಲ್ಲ. ಎಚ್ಡಿಕೆಗೆ ನನ್ನನ್ನು ಕಂಡರೆ ಭಯ ಅನಿಸುತ್ತದೆ, ಯಾರ ಮೇಲೆ ಭಯವಿರುತ್ತದೋ ಅವರನ್ನು ಟಾರ್ಗೆಟ್ ಮಾಡುತ್ತಾರೆ" ಎಂದರು.
ಇನ್ನು ಸಂವಿಧಾನಿಕವಾಗಿರುವ ವಿಪಕ್ಷ ನಾಯಕನ ಹುದ್ದೆ ಕುಮಾರಸ್ವಾಮಿ ಅವರ ಪ್ರಕಾರ 'ಪುಟಗೋಸಿ'. ಮುಖ್ಯಮಂತ್ರಿಯಾಗಿದ್ದವರು ಇಂತಹ ಮಾತುಗಳನ್ನಾಡಬಾರದು. ವಿಪಕ್ಷ ನಾಯಕನ ಹುದ್ದೆ ಅವರ ಪ್ರಕಾರ ಪುಟಗೋಸಿ ಎನ್ನುವುದಾದರೆ ಹೆಚ್.ಡಿ.ದೇವೇಗೌಡರೂ ವಿರೋಧ ಪಕ್ಷದ ನಾಯಕರಾಗಿದ್ದರು ಹಾಗಾದರೆ ಅದು ಕೂಡ ಪುಟಗೋಸಿನಾ? ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ" ಎಂದು ವಾಗ್ದಾಳಿ ನಡೆಸಿದ್ದಾರೆ..
ನಾನು ಐದು ದಶಕಗಳಿಂದ ರಾಜಕೀಯದಲ್ಲಿದ್ದು, ಕುಮಾರಸ್ವಾಮಿಯವರು ರಾಜಕೀಯವಾಗಿ ಇತ್ತೀಚಿನವರು, ನಾನು ರಾಜಕೀಯದಲ್ಲಿ ಕುಮಾರಸ್ವಾಮಿಗಿಂತ ಅನುಭವಿ ಎಂದು ಹೇಳಿದ್ದಾರೆ.