ನವದೆಹಲಿ, ಅ 13 (DaijiworldNews/MS): ಸಾವರ್ಕರ್ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ ವಿಚಾರದ ಬಗ್ಗೆ ಸುಳ್ಳುಗಳನ್ನು ಪ್ರಚಾರ ಮಾಡಿ ದೊಡ್ಡ ವಿಷಯ ಮಾಡಲಾಗುತ್ತಿದೆ. ಆದರೆ ಮಹಾತ್ಮ ಗಾಂಧಿ ಅವರ ಸಲಹೆ ಮೇರೆಗೆ ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು ಎಂಬ ಸತ್ಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮಂಗಳವಾರ ನಡೆದ ಸಾವರ್ಕರ್ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಮಾತನಾಡಿದ ಅವರು ವೀರ ಸಾವರ್ಕರ್ ಅವರಂತೆ ನೇರ, ದಿಟ್ಟ, ನಿಷ್ಠುರವಾಗಿ ಮಾತನಾಡುವವರು ಅಂದು ಇನ್ನು ಒಂದಷ್ಟು ಜನ ಇರುತ್ತಿದ್ದರೆ ಇಂದು ನಮ್ಮ ದೇಶ ಎರಡು ವಿಭಜನೆ ಆಗುವ ಮಾತೇ ಬರುತ್ತಿರಲಿಲ್ಲ
ಸಾವರ್ಕರ್ ಅವರು ಹಿಂದುತ್ವದ ಐಕಾನ್ ಆಗಿದ್ದವರು. ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರಗಳನ್ನು ಬರೆದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರವನ್ನು ಬರೆದರು ಎಂದು ಹಲವು ಬಾರಿ ಹೇಳಿಕೆ ನೀಡಲಾಗುತ್ತಿದೆ. ಆದರೆ ನೈಜ ವಿಚಾರ ಏನೆಂದರೆ ಸಾವರ್ಕರ್ ಬಿಡುಗಡೆ ಬಯಸಿ ಕ್ಷಮಾಪಣೆ ಪತ್ರಗಳನ್ನು ಬರೆಯಲಿಲ್ಲ. ಮಹಾತ್ಮ ಗಾಂಧಿ ಅವರು ಕ್ಷಮಾಪಣೆ ಪತ್ರ ಬರೆಯುವಂತೆ ಸಾವರ್ಕರ್ ಅವರಿಗೆ ಸೂಚಿಸಿದರು. ನಂತರ ಸಾವರ್ಕರ್ ಅವರನ್ನು ಬಿಡುಗಡೆ ಮಾಡುವಂತೆ ಗಾಂಧಿ ಮನವಿ ಮಾಡಿದ್ದರು. ಸ್ವಾತಂತ್ರ್ಯ ಚಳುವಳಿಯನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಗಾಂಧಿ ಹೇಳಿದ್ದರು. ಅದರಂತೆ ಸಾವರ್ಕರ್ ನಡೆದುಕೊಂಡರು. ಅಷ್ಟಕ್ಕೂ, ಜೈಲಿನಲ್ಲಿ ಇರುವ ಕೈದಿಗಳು ಈ ರೀತಿ ಕ್ಷಮಾದಾನದ ಅರ್ಜಿ ಸಲ್ಲಿಸುವುದು ಹೊಸ ವಿಷಯವಲ್ಲ ಎಂದು ರಾಜನಾಥ್ ಸಿಂಗ್ ವಿವರಿಸಿದರು.