ನವದೆಹಲಿ, ಅ 12 (DaijiworldNews/MS): ಕೊರೊನಾ ನಿರೋಧಕ ಲಸಿಕೆ ಅಭಿಯಾನದ ಮುಂದಿನ ಹಂತವಾಗಿ 2 ವರ್ಷದ ಮಕ್ಕಳಿಂದ 18 ವರ್ಷದ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡುವಂತೆ ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞರ ಸಮಿತಿ (ಎಸ್ ಇಸಿ) ಡಿಸಿಜಿಐಗೆ ಮಂಗಳವಾರ ಶಿಫಾರಸ್ಸು ಮಾಡಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ವಿಷಯ ತಜ್ಞರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಿದೆ.
ಸೆಪ್ಟೆಂಬರ್ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್ನ 2 ಮತ್ತು 3ನೇ ಹಂತದ ಪ್ರಯೋಗಗಳನ್ನು ಭಾರತ್ ಬಯೋಟೆಕ್ ಪೂರ್ಣಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಪ್ರಯೋಗದ ವರದಿಯನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಸಲ್ಲಿಸಲಾಗಿತ್ತು
ಪ್ರಯೋಗದ ವರದಿಯ ಮೇಲೆ ನಡೆದ ವಿವರವಾದ ಚರ್ಚೆಯ ಬಳಿಕ 2 ರಿಂದ 18 ವರ್ಷದ ವಯೋಮಾನದವರಿಗೆ ತುರ್ತು ಬಳಕೆಗೆ ಕೋವಾಕ್ಸಿನ್ ಲಸಿಕೆಗೆ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಮೊದಲು ಮತ್ತು ಎರಡನೇ ಡೋಸ್ಗಳ ನಡುವಿನ ಅಂತರ 20 ದಿನಗಳಿರಬೇಕೆಂದು ಸಮಿತಿ ಸಲಹೆ ನೀಡಿದೆ.
ಆದರೆ, ಡಬ್ಲ್ಯುಎಚ್ಒ ಕೋವಾಕ್ಸಿನ್ಗೆ ತುರ್ತು ಬಳಕೆಯ ಇನ್ನು ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ. ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ ಎನ್ನಲಾಗಿದೆಯಾದರೂ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.