ಬೆಂಗಳೂರು, ಅ 12 (DaijiworldNews/MS): ಕಲ್ಲಿದ್ದಲಿನ ಅಭಾವ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿನ ಹಿನ್ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಸೃಷ್ಟಿಯಾದ ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ.ಕಲ್ಲಿದ್ದಲು ಕೊರತೆ ತೀವ್ರಗೊಳ್ಳುವವರೆಗೂ ಕಣ್ಮುಚ್ಚಿ ಕುಳಿತಿದ್ದೇಕೆ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇಲ್ಲವೇ? ಬಿಕ್ಕಟ್ಟು ಎದುರಿಸಲು ಸರ್ಕಾರದ ಕಾರ್ಯಸೂಚಿ ಏನು? ಎಂದು ಪ್ರಶ್ನಿಸಿದೆ.
ಇಂಧನ ತೈಲಗಳ ಬೆಲೆ ಏರಿಕೆಗೆ ಎಲೆಕ್ಟ್ರಿಕ್ ವಾಹನ ಬಳಸಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದರು ಬಿಜೆಪಿ ನಾಯಕರು. ಬಿಜೆಪಿ ನಾಯಕರಿಗೆ ವಿದ್ಯುತ್ ಪುಕ್ಕಟೆಯಾಗಿ ದೊರಕುತ್ತದೆ ಎಂಬ ಕಲ್ಪನೆ ಇರಬಹುದೇನೋ! ಇಂದು ಅದೇ ಮೂರ್ಖ ಸಲಹೆಗಾರರು ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿದ್ದಾರೆ ಎಂದು ವ್ಯಂಗ್ಯವಾಡಿದೆ.
ಬೇಜವಾಬ್ದಾರಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕತ್ತಲೆ ಆವರಿಸಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ರಾಜ್ಯದವರೇ ಆಗಿದ್ದರೂ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಉಂಟಾಗಿದ್ದ ವಿಪರ್ಯಾಸ. ಬಿಜೆಪಿ ನಾಯಕರು ಹೇಳುವ 'ಡಬಲ್ ಇಂಜಿನ್ ಗ್ರೋಥ್' ಎಂಬ ಮಾತುಗಳ ಡೋಂಗಿತನಕ್ಕೆ ಮತ್ತೊಂದು ಉದಾಹರಣೆ ಇದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಟೀಕಿಸಿದೆ.