ಮುಂಬೈ, ಅ 12 (DaijiworldNews/MS): ಮಾದಕದ್ರವ್ಯ ನಿಯಂತ್ರಣ ಬ್ಯೂರೋ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಇತ್ತೀಚಿನ ಕ್ರೂಸ್ ಡ್ರಗ್ಸ್ ಬಸ್ಟ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಇಬ್ಬರು ಪೊಲೀಸರು ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಆರೋಪಿಸಿ ಮುಂಬೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಎನ್ಸಿಬಿ ಅಧಿಕಾರಿಯ ಪ್ರಕಾರ, ವಾಂಖೇಡೆ ನಿಯಮಿತವಾಗಿ ಓಶಿವರಾ ಉಪನಗರದ ಸ್ಮಶಾನಕ್ಕೆ ಭೇಟಿ ನೀಡುತ್ತಿದ್ದರು, ಅಲ್ಲಿ ಅವರ ತಾಯಿ 2015 ರಲ್ಲಿ ಮರಣ ಹೊಂದಿದ ನಂತರ ಸಮಾಧಿ ಮಾಡಲಾಗಿತ್ತು. ಒಶಿವರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಸ್ಮಶಾನ ಬಳಿ ಹೋಗಿ ವಾಂಖೆಡೆಯವರ ಚಲನವಲನಗಳನ್ನು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮೇಲೆ ಅಕ್ರಮವಾಗಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ ಎಂದು ಸಮೀರ್ ವಾಂಖೆಡೆಯವರು ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ದೂರು ನೀಡಿರುವ ಸಮೀರ್ ವಾಂಖೆಡೆಯವರು ತಮ್ಮ ದೂರಿಗೆ ಪೂರಕವಾಗಿ ಪುಷ್ಠೀಕರಿಸಲು ಒಶಿವರ ಸ್ಮಶಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಿದ್ದಾರೆ.
ಕಳೆದ ಅಕ್ಟೋಬರ್ 2ರಂದು ತಡರಾತ್ರಿ ಮುಂಬೈಯ ಕ್ರೂಸ್ ಹಡಗಿನ ಮೇಲೆ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದು ಮಾತ್ರವಲ್ಲದೆ ಕಳೆದ ವರ್ಷ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕೇಳಿಬಂದ ಬಾಲಿವುಡ್ ಡ್ರಗ್ ಕೇಸು ಹಾಗೂ ಇತರ ಹೈಪ್ರೊಫೈಲ್ ಡ್ರಗ್ ಕೇಸುಗಳ ವಿಚಾರಣೆಗಳನ್ನು ಸಹ ನಡೆಸಿದ್ದರು.