ಮುಂಬೈ, ಅ.11 (DaijiworldNews/HR): 20 ವರ್ಷದ ನವ ವಿವಾಹಿತೆ ಮೇಲೆ ಮಹಾರಾಷ್ಟ್ರದ ಇಗತ್ಪುರಿ ಮತ್ತು ಕಾಸರ ರೈಲು ನಿಲ್ದಾಣಗಳ ನಡುವೆ ಲಖನೌ -ಮುಂಬೈ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಪ್ರಯಾಣಿಕರನ್ನು ದರೋಡೆ ಮಾಡಿದ್ದ ಎಂಟು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಕಾಶ್ ಅಲಿಯಾಸ್ ಪಾಕ್ಯ ದಾಮು ಪಾರ್ಧಿ (20), ಅರ್ಷದ್ ಶೇಖ್ (19), ಅರ್ಜುನ್ ಅಲಿಯಾಸ್ ಪವ್ಯಾ ಸುಭಾಷ್ ಸಿಂಗ್ ಪರದೇಶಿ (20), ಕಿಶೋರ್ ನಂದು ಸೋನವಾನೆ ಅಲಿಯಾಸ್ ಕಾಲಿಯಾ (25), ಕಾಶಿನಾಥ ರಾಮಚಂದ್ರ ತೇಲಂ ಕಶ್ಯ (23), ಆಕಾಶ್ ಶೆಣೋರ್ ಅಲಿಯಾಸ್ ಅಕ್ಯ (20), ಧನಂಜಯ್ ಭಗತ್ ಅಲಿಯಾಸ್ ಗುದ್ದು (19) ಮತ್ತು ರಾಹುಲ್ ಆಡೋಲೆ ಅಲಿಯಾಸ್ ರಾಹುಲ್ಯಾ (22) ಎಂದು ಗುರುತಿಸಲಾಗಿದೆ.
ಈ ಘಟನೆ ಶುಕ್ರವಾರ ರಾತ್ರಿ ನಡೆದಿತ್ತು. ಆರೋಪಿಗಳು ಇಗತ್ಪುರಿಯಲ್ಲಿ ಮುಂಬೈಗೆ ಹೋಗುವ ರೈಲು ಹತ್ತಿದ್ದರು. ರೈಲು ಘಾಟ್ ಸೆಕ್ಷನ್ ಮೂಲಕ ಹಾದು ಹೋಗುತ್ತಿದ್ದಾಗ ನವ ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದರು. ಮೊದಲು ನಾಲ್ವರನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.