ಬೆಂಗಳೂರು, ಅ.11 (DaijiworldNews/PY): "ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಭಗ್ನಗೊಂಡಿದೆ" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆ ಸಾಕ್ಷಿಯಾಗಿದೆ. ಕೆಪಿಸಿಸಿ ಆಯೋಜಿಸಿದ್ದ ಮೌನ ಪ್ರತಿಭಟನೆಯನ್ನು ಸಿದ್ದರಾಮಯ್ಯ ಅವರು ಖುದ್ದು ಧಿಕ್ಕರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಕೂಡಾ ಭಗ್ನಗೊಂಡಿದೆ" ಎಂದಿದೆ.
"ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ, ಒಡೆದು ಮೂರು ಬಾಗಿಲಾಗಿದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಡಿಕೆಶಿ ಬಣ ಸಂಚು ನಡೆಸಿದ್ದರೆ, ಪರಮೇಶ್ವರ ವಿರುದ್ದ ಸಿದ್ದರಾಮಯ್ಯ ಕತ್ತಿ ಮಸೆಯುತ್ತಿದ್ದಾರೆ" ಎಂದು ಹೇಳಿದೆ.
ಅಸೌಖ್ಯದ ಆಘಾತದಲ್ಲಿರುವಾಗಲೇ, ವಿಮಾನ ನಿಲ್ಧಾಣದಲ್ಲೇ ಮುಖ್ಯಮಂತ್ರಿಯೊಬ್ಬರನ್ನು ಪದಚ್ಯುತಿಗೊಳಿಸಿದ ಅಪಕೀರ್ತಿಯನ್ನು ಕಾಂಗ್ರೆಸ್ ಹೊತ್ತುಕೊಂಡಿದೆ. "ನನ್ನನ್ನು ಕಾಂಗ್ರೆಸ್ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ", ರಾತೋರಾತ್ರಿ ನೀವೇ ಪದಚ್ಯುತಿಗೊಳಿಸಿದ ಪಂಜಾಬಿನ ಮಾಜಿ ಮುಖ್ಯಮಂತ್ರಿಯ ಮಾತುಗಳಿವು. ಇದು ಅವಮಾನವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.