ಬೆಂಗಳೂರು, ಅ.11 (DaijiworldNews/PY): "ಸೋಂಕಿತ ಸರ್ಕಾರದ ಅನಾರೋಗ್ಯ ಪೀಡಿತ ಆಡಳಿತದಲ್ಲಿ ಜನರ ಜೀವಕ್ಕೆ ಖಾತರಿ ಇಲ್ಲ, ಆರೋಗ್ಯ ಇಲಾಖೆಯ ಅವ್ಯವಸ್ಥೆಗೂ ಚಿಕಿತ್ಸೆ ಇಲ್ಲ!" ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸೋಂಕಿತಸರ್ಕಾರದ ಅನಾರೋಗ್ಯ ಪೀಡಿತ ಆಡಳಿತದಲ್ಲಿ ಜನರ ಜೀವಕ್ಕೆ ಖಾತರಿ ಇಲ್ಲ, ಆರೋಗ್ಯ ಇಲಾಖೆಯ ಅವ್ಯವಸ್ಥೆಗೂ ಚಿಕಿತ್ಸೆ ಇಲ್ಲ! ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸದೆ ಬಡವರಿಗೆ ಚಿಕಿತ್ಸೆಯನ್ನು ದುಬಾರಿಯಾಗಿಸಿದೆ, ಸುಧಾಕರ್ ಅವರೇ, ಮಹಿಳೆಯರ ಮದುವೆ ಬಗ್ಗೆ ಚಿಂತಿಸುವ ಬದಲು ತಮ್ಮ ಇಲಾಖೆಯ ಅವ್ಯವಸ್ಥೆಯ ಬಗ್ಗೆ ಚಿಂತಿಸಿದರೆ ಒಳಿತು" ಎಂದಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಣ್ಣಲ್ಲಿ ಹಲವಾರು ಬಾರಿ 'ಅಸಲಿ ಕಣ್ಣೀರು' ತರಿಸಿದ ಬಿಜೆಪಿ ಈಗ ಅವರಿಗೆ ತೋರಿಸಿದ 'ಸ್ಥಾನ' ಯಾವುದು, ಕೊಡುತ್ತಿರುವ 'ಮಾನ' ಯಾವುದು, ಮಾಡಿದ 'ಅವಮಾನ' ಏನು ಎಂಬುದು ರಾಜ್ಯಕ್ಕೆ ತಿಳಿದಿದೆ. ಅವಧಿ ಪೂರೈಸಲು ಬಿಡದೆ ಏಕಾಏಕಿ ಪದಚ್ಯುತಿಗೊಳಿಸಿದ್ದೇಕೆ ಎಂಬುದು ಇನ್ನೂ ನಿಗೂಢ. ತಾಕತ್ತಿದ್ದರೆ ಬಿಜೆಪಿ ಉತ್ತರಿಸಲಿ ಎಂದು ಸವಾಲು ಹಾಕಿದೆ.
"ಇಂಧನ ತೈಲಗಳ ಬೆಲೆ 7 ದಿನಗಳಿಂದ ನಿರಂತರ ಏರಿಕೆ ಕಂಡಿದೆ, ರಾಜ್ಯದಲ್ಲೂ ಡೀಸೆಲ್ ದರ 100 ರೂಪಾಯಿಗಳ ಗಡಿ ದಾಟಿದೆ, ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೆ ಮುಟ್ಟಿವೆ, ಬಡವರ ಮನೆಯ ಒಲೆಗಳು ಆರಿವೆ. ವಿರೋಧ ಪಕ್ಷವಾಗಿದ್ದಾಗ ಹೊರಳಾಡುತ್ತಿದ್ದ ಬಿಜೆಪಿಗರ ಕೈಯಲ್ಲೇ ಅಧಿಕಾರವಿದೆ, ಈಗೇಕೆ ಈ ಮೌನ ಬಿಜೆಪಿ?" ಎಂದು ಪ್ರಶ್ನಿಸಿದೆ.