ಬೆಂಗಳೂರು, ಅ.11 (DaijiworldNews/PY): "ಇದೇ ಮೊದಲ ಬಾರಿಗೆ ದೇಶದಲ್ಲಿ ಉದ್ಯೋಗ ನೀತಿ ಜಾರಿಗೊಳ್ಳುತ್ತಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿರುವ ಉದ್ಯಮಿಯಾಗು - ಉದ್ಯೋಗ ನೀಡು ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು, "ಕೈಗಾರಿಕಾ ನೀತಿ ಸ್ಟಾರ್ಟ್ಅಪ್ ನೀತಿ ಬಂದಾಯಿತು. ಇದೀಗ ಉದ್ಯೋಗ ನೀತಿ ಅಸ್ತಿತ್ವಕ್ಕೆ ಬರಲಿದೆ. ದೇಶದಲ್ಲಿ ಈ ರೀತಿಯಾದ ನೀತಿ ಜಾರಿಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಆಗಿದೆ" ಎಂದಿದ್ದಾರೆ.
"ಈಗಾಗಲೇ ರಾಜ್ಯದಲ್ಲಿ ಸೆಮಿಕಂಡಕ್ಟರ್, ಸ್ಟಾರ್ಟ್ಅಪ್, ಕೈಗಾರಿಕೆಗೆ ಸಂಬಂಧಪಟ್ಟಂತ ನೀತಿಗಳು ಜಾರಿಯಲ್ಲಿವೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಉದ್ಯೋಗ ನೀತಿ ಜಾರಿಗೊಳಿಸುತ್ತಿದೆ" ಎಂದು ತಿಳಿಸಿದ್ದಾರೆ.
"ಪ್ರಗತಿಪರ ಕರ್ನಾಟಕ ರಾಜ್ಯ, ಎಲ್ಲ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸದಾ ಆದ್ಯತೆ ನೀಡಿಕೊಂಡು ಬಂದಿದೆ. ಇಡೀ ದೇಶದಲ್ಲೇ ಅತಿಹೆಚ್ಚು ನವೋದ್ಯಮಗಳಿರುವುದು ಕರ್ನಾಟಕದಲ್ಲಿ! ದೇಶದಲ್ಲೇ ಮೊದಲ ಬಾರಿಗೆ ಆರ್ ಆಂಡ್ ಡಿ ನೀತಿ, ಉದ್ಯೋಗ ನೀತಿಗಳನ್ನು ಕರ್ನಾಟಕ ಸರ್ಕಾರ ರೂಪಿಸುತ್ತಿದೆ. ಯುವಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕರ್ನಾಟಕ ಅತ್ಯುತ್ತಮ ರಾಜ್ಯ" ಎಂದು ಹೇಳಿದ್ದಾರೆ.