ಲಕ್ನೋ, ಅ 11 (DaijiworldNews/MS): ಲಖಿಮ್ಪುರ್ ಖೇರಿ ಹಿಂಸಾಚಾರ ಆರೋಪದಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರು ಸೋಮವಾರ ಮೂರು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.
ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಹಿಂಭಾಗದಿಂದ ಆಶಿಶ್ ಮಿಶ್ರಾ ಅವರಿಗೆ ಸೇರಿದ ಎಸ್ಯುವಿ ಮತ್ತು ಅವರ ಬೆಂಗಾವಲು ಕಾರು ಮೇಲೆಯೇ ಚಲಿಸಿದ್ದು ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಮತ್ತು ಒಬ್ಬ ಸ್ಥಳೀಯ ಪತ್ರಕರ್ತ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.
ಈ ಪ್ರಕರಣದಿಂದ ಆಶಿಶ್ ಮಿಶ್ರಾ ನುಣುಚಿಕೊಳ್ಳಲು ಯತ್ನಿಸಿದರೂ ಉತ್ತರ ಪ್ರದೇಶ ಪೊಲೀಸರು ಆಶಿಶ್ ಮಿಶ್ರಾ ಅವರನ್ನು ಶನಿವಾರ ಬಂಧಿಸಿದ್ದಾರೆ. ನಂತರ ಅವರನು ಸುಮಾರು 12 ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು ಸ್ಥಳೀಯ ನ್ಯಾಯಾಲಯವು ಆಶಿಶ್ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಕ್ಟೋಬರ್ 12 ರಿಂದ 15 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಇಡೀ ವಿರೋಧ ಪಕ್ಷಗಳು ಆಶಿಶ್ ಮಿಶ್ರಾ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸುತ್ತಿವೆ. ಆಶಿಶ್ ತಂದೆ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸಲು ಆಗ್ರಹಿಸಿವೆ.