ಬೆಂಗಳೂರು, ಅ.11 (DaijiworldNews/PY): "ಒಂದೆರಡು ದಿನಗಳಲ್ಲಿ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉಂಟಾದಂತ ಕಲ್ಲಿದ್ದಲು ಕೊರತೆ ಪರಿಹಾರವಾಗಲಿದೆ" ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.
ಕೆಪಿಟಿಸಿಎಲ್ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕಲ್ಲಿದ್ದಲು ಕೊರತೆಯ ಪರಿಣಾಮ ಸಮಸ್ಯೆ ಆಗಬಹುದು ಎನ್ನುವ ಆತಂಕವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ" ಎಂದು ತಿಳಿಸಿದ್ದಾರೆ.
"ವಿದ್ಯುತ್ ಉತ್ಪಾದನೆಯ ಅವಧಿಯನ್ನು ಕೆಲವು ವಿದ್ಯುತ್ ಸ್ಥಾವರಗಳಲ್ಲಿ ಕಡಿಮೆ ಮಾಡಲಾಗಿತ್ತು. ಉತ್ಪಾದನೆ ಯಾವುದೇ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸಂಪೂರ್ಣ ಸ್ಥಗಿತವಾಗಿರಲಿಲ್ಲ" ಎಂದಿದ್ದಾರೆ.
"ಒಡಿಶಾದ ಮಹಾನಂದಿ ಗಣಿಯಿಂದ ಕಲ್ಲಿದ್ದಲು ತುಂಬಿಕೊಂಡು ಹಿರಟಿರುವ ಒಂದು ರೇಕ್ ರಾಜ್ಯಕ್ಕೆ ಮಂಗಳವಾರ ತಲುಪಲಿದೆ. ಬುಧವಾರದಂದು ಮತ್ತೊಂದು ರೇಕ್ ಬರಲಿದ್ದು, ಇದರಿಂದ ಸಮಸ್ಯೆ ನಿವಾರಣೆಯಾಗಲಿದೆ" ಎಂದು ತಿಳಿಸಿದ್ದಾರೆ.
"ಸದ್ಯಕ್ಕೆ 10 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿತ್ತು. ಇದನ್ನು 14 ರೇಕ್ಗಳಿಗೆ ಏರಿಕೆ ಮಾಡಲು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಲಾಗಿದೆ. ತಕ್ಷಣವೇ ಎರಡು ರೇಕ್ ಬರಲಿದ್ದು, ನವೆಂಬರ್ನಲ್ಲಿ ಇನ್ನೆರಡು ರೇಕ್ ನೀಡುವಂತೆ ಮನವಿ ಮಾಡಲಾಗಿದೆ" ಎಂದಿದ್ದಾರೆ.
"ಮಹಾರಾಷ್ಟ್ರದ ಮಂದಾಕಿನಿ ಹಾಗೂ ಬಾರಂಜಿಯಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆಯ ಅನುಮತಿ ಅವಶ್ಯಕ. ಅನುಮತಿ ಕೊಡಿಸುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಅನುಮತಿ ದೊರೆತಲ್ಲಿ ರಾಜ್ಯ ಸರ್ಕಾರ ಕಲ್ಲಿದ್ದಲು ತೆಗೆಯಲು ಅವಶ್ಯಕವಿರುವ ಕ್ರಮಗಳನ್ನು ತೆಗೆದುಕೊಳ್ಳಲಿದೆ" ಎಂದು ಹೇಳಿದ್ದಾರೆ.