ಬೆಂಗಳೂರು, ಅ.11 (DaijiworldNews/PY): "ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ ಜಿ23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ" ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ ಜಿ23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ" ಎಂದು ಕಿಡಿಕಾರಿದೆ.
"ಕಾಂಗ್ರೆಸ್ ಪಕ್ಷ ಒಬ್ಬೊಬ್ಬ ಹಿರಿಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್, ಕಪಿಲ್ ಸಿಬಲ್ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ. ನಿಮ್ಮದು ಯಾವ ಟ್ರೆಂಡ್ ಕಾಂಗ್ರೆಸ್?" ಎಂದು ಪ್ರಶ್ನಿಸಿದೆ.
"ಸಂಪತ್ತಿನ ಯಾವುದೇ ಮೂಲವಿರದಿದ್ದರೂ ಗೋವಿಂದ ರಾಜ್ ಅವರು ಕಾಂಗ್ರೆಸ್ ಹೈಕಮಾಂಡಿಗೆ ಕೋಟಿಗಟ್ಟಲೆ ಕಪ್ಪ ಸಲ್ಲಿಸಿದ್ದೇಗೆ? ಈ ವ್ಯಕ್ತಿಯೇ ಇಷ್ಟೊಂದು ಕಪ್ಪ ನೀಡಿರಬೇಕಾದರೆ, ಇದರ ಸೂತ್ರದಾರ, ಜಾತಿ ರಾಜಕಾರಣ ಮಾಡುತ್ತಿರುವ ವ್ಯಕ್ತಿ ಎಷ್ಟು ಕಪ್ಪು ಹಣ ಸಂಗ್ರಹಿಸಿರಬಹುದು?" ಎಂದು ಕೇಳಿದೆ.
"ಕಾಂಗ್ರೆಸ್, ಗೋವಿಂದ ರಾಜ್ ಡೈರಿ ನೆನಪಿದೆಯೇ? ನೂರಾರು ಕೋಟಿ ಕಪ್ಪವನ್ನು ಕಾಂಗ್ರೆಸ್ ಹೈಕಮಾಂಡ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪರವಾಗಿ ಸಲ್ಲಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ. ಡೈರಿ ಗೋವಿಂದ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು. ಮಾಡಲು ಉದ್ಯೋಗವಿಲ್ಲ, ವಾಣಿಜ್ಯ ವ್ಯವಹಾರ ಇಲ್ಲ. ಇಂಥವರು ನೂರಾರು ಕೋಟಿ ಕಪ್ಪ ಕೊಟ್ಟಿದ್ದೇಗೆ?" ಎಂದು ಪ್ರಶ್ನಿಸಿದೆ.