ಜಮ್ಮು, ಅ.11 (DaijiworldNews/PY): "ಪಾಕ್ ಮೂಲದ ವ್ಯಕ್ತಿಯೊಂದಿಗೆ ವಿಡಿಯೋ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ಉತ್ತರಪ್ರದೇಶದ ಶಂಕಿತ ಗೂಢಾಚಾರಿಯನ್ನು ಬಂಧಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಆತನನ್ನು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಇಲ್ಲಿನ ಗಾಂಧಿ ನಗರ ಪ್ರದೇಶದಿಂದ ಬಂಧಿಸಿದೆ" ಎಂದು ತಿಳಿಸಿದ್ದಾರೆ.
"ವ್ಯಕ್ತಿಯ ವಿರುದ್ದ ಸೂಕ್ತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, "ಬಂಧಿತ ವ್ಯಕ್ತಿ ಪಾಕಿಸ್ತಾನ ವ್ಯಕ್ತಿಗಳೊಂದಿಗೆ ಸ್ಥಳೀಯ ಪ್ರಾರ್ಥನಾ ಮಂದಿರಗಳು ಸೇರಿದಂತೆ ಮಹತ್ವದ ಮಾಹಿತಿಗಳನ್ನು ವಿಡಿಯೋ ಸಹಿತ ಹಂಚಿಕೊಂಡಿದ್ದಾನೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜಮ್ಮುವಿನ ನಗ್ರೋತಾ ಪ್ರದೇಶದಿಂದ ಪಿಸ್ತೂಲ್ ಕಳವು ಮಾಡಿದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಹ್ದ್ ಮುಷ್ತಾಕ್ ಅಲಿಯಾಸ್ ಗುಂಗಿ ಎಂದು ಗುರುತಿಸಲಾಗಿದೆ.
"ಈತ ಇತ್ತೀಚೆಗೆ ಮಿರಾನ್ ಸಾಹಿಬ್ ಪ್ರದೇಶದಲ್ಲಿರುವ ವ್ಯಕ್ತಿಯೋರ್ವನಿಂದ ಪಿಸ್ತೂಲ್ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನಿಂದ ಕಳವು ಮಾಡಿದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದಿದ್ದಾರೆ.
ಈತನ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.