ಬೆಂಗಳೂರು, ಅ.11 (DaijiworldNews/HR): ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಪ್ರಕಟಿಸಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
53,155 ಮಂದಿ ವಿದ್ಯಾರ್ಥಿಗಳು ಈ ಬಾರಿ ಪೂರಕ ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 55.54 ಶೇಕಡಾ ವಿದ್ಯಾರ್ಥಿಗಳು ಅಂದರೆ 29,522 ಮಂದಿ ಉತ್ತೀರ್ಣರಾಗಿದ್ದಾರೆ.
ಇನ್ನು ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿರುವುದಾಗಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 10290 ಬಾಲಕಿಯರು (57.25%) ಉತ್ತೀರ್ಣರಾದರೆ, 19232 ಬಾಲಕರು (54.66%) ಉತ್ತೀರ್ಣರಾಗಿದ್ದಾರೆ.
http://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯ ನಂತರ ತಾತ್ಕಾಲಿಕ ಅಂಕಪಟ್ಟಿ ಇಲಾಖೆ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.