ಬೆಂಗಳೂರು, ಅ.11 (DaijiworldNews/HR): ನಮಗೆ ಓದಿನಲ್ಲಿ ಆಸಕ್ತಿಯಿಲ್ಲ ಎಂದು ಪತ್ರ ಬರೆದು ಬೆಂಗಳೂರಿನಿಂದ ನಾಪತ್ತೆಯಾಗಿದ್ದ 7 ಮಕ್ಕಳ ಪೈಕಿ ಮೂವರು ಪತ್ತೆಯಾಗಿದ್ದಾರೆ.
ಉಪ್ಪಾರಪೇಟೆ ಠಾಣೆ
ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಪತ್ತೆಯಾಗಿದ್ದು, ಅವರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿದ್ದಾರೆ. ಆದರೆ ಮತ್ತೊಂದು ಪ್ರಕರಣದಲ್ಲಿ ನಾಪತ್ತೆಯಾಗಿರುವ ಉಳಿದ ಮಕ್ಕಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಓದಿನಲ್ಲಿ ಆಸಕ್ತಿ ಇಲ್ಲ,ಕಬಡ್ಡಿಯಲ್ಲಿ ಆಸಕ್ತಿಯಿದೆ. ಕ್ರೀಡೆಯಲ್ಲೇ ಸಾಧನೆ ಮಾಡುತ್ತೇವೆ ಎಂದು ಮನೆ ಬಿಟ್ಟಿದ್ದ ಈ ಮೂವರೂ ಮಕ್ಕಳು ಆನಂದರಾವ್ ಸರ್ಕಲ್ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ಪೇಪರ್ ಆಯುವ ವ್ಯಕ್ತಿಯಿಂದ ಮಾಹಿತಿ ಲಭ್ಯವಾಗಿರುವುದಾಗಿ ವರದಿಯಾಗಿದೆ.
ಇನ್ನು ಪೇಪರ್ ಆಯುವ ವ್ಯಕ್ತಿ ತಕ್ಷಣ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದು ಬೀಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಬಳಿಕ ಮಕ್ಕಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ.
ನಾಪತ್ತೆಯಾದ ಮಕ್ಕಳು ಇವರೇ ಎಂಬುದು ಖಾತರಿಯಾಗುತ್ತಿದ್ದಂತೆ ಆ ಮಕ್ಕಳಿಂದ ಫೋನ್ ನಂಬರ್ ತೆಗೆದುಕೊಂಡು ಅವರ ಪೋಷಕರಿಗೆ ಪೊಲೀಸರು ಕರೆ ಮಾಡಿದ್ದಾರೆ.
ಮೂವರೂ ಮಕ್ಕಳು ಶನಿವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೋಗಿದ್ದು, ಜಾಗಿಂಗ್ಗೆ ಹೋಗಿಬರುವುದಾಗಿ ಮನೆಯಿಂದ ಹೊರಟಿದ್ದರು. ಮನೆಯಿಂದ ಬರುವಾಗ ತಲಾ 1,500 ರೂ. ತಂದಿದ್ದರು. ಮೊದಲು ಮಂಗಳೂರಿಗೆ ಹೋಗಲು ಪ್ಲ್ಯಾನ್ ಮಾಡಿದ್ದು, ಬಳಿಕ ಮೈಸೂರಿಗೆ ಹೋಗಿದ್ದರು. ಮೈಸೂರಿನಲ್ಲಿ ದಸರಾ ನೋಡಿಕೊಂಡು ನಿನ್ನೆ ರಾತ್ರಿ ವಾಪಸ್ ಆಗಿದ್ದಾರೆ. ನಿನ್ನೆ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಮಕ್ಕಳು ಬೆಳಗ್ಗೆ ಆನಂದರಾವ್ ಸರ್ಕಲ್ನಲ್ಲಿದ್ದಾಗ ಪತ್ತೆಯಾಗಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದು, ಸೋಲದೇವನಹಳ್ಳಿ ನಿವಾಸಿಗಳಾದ ರಾಯನ್, ವರ್ಷಿಣಿ, ಭೂಮಿ ಮತ್ತು ಚಿಂತನ್ ಇನ್ನೂ ಪತ್ತೆಯಾಗಿಲ್ಲ. ಸೋಲದೇವನಹಳ್ಳಿ ಪೊಲೀಸರು ಇವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸೋಲದೇವನಹಳ್ಳಿ ಆಜುಬಾಜು ನಾಲ್ಕೂ ಮಕ್ಕಳ ಚಲನವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.