ನವದೆಹಲಿ, ಅ.11 (DaijiworldNews/PY): ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಇರಿಸಿದ್ದ ಪ್ರಸ್ತಾಪವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರಸ್ಕರಿಸಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬೇಸರ ತಂದಿದೆ. ಸಿದ್ದರಾಮಯ್ಯ ಅವರ ಹಠಮಾರಿ ಧೋರಣೆ ನಾಯಕತ್ವವನ್ನು ಅಚ್ಚರಿಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಒಂದು ಪ್ರಮುಖ ರಾಜ್ಯದ ಉಸ್ತುವಾರಿಯ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶೀಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳಲಾಗಿತ್ತು. ಅಲ್ಲದೇ, ಪಕ್ಷದ ಕಾರ್ಯಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಕ ಮಾಡುವ ಪ್ರಸ್ತಾಪವನ್ನು ಕೂಡಾ ಇರಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗಿನ ಮುಸುಕಿನ ಗುದ್ದಾಟವನ್ನು ಕೊನೆಗೊಳಿಸಲು ಹಾಗೂ ಪಕ್ಷದ ಹಿರಿಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತಂದು ನಾಯಕತ್ವವನ್ನು ಯುವಕರಿಗೆ ನೀಡುವ ರಾಹುಲ್ ಗಾಂಧಿ ಅವರ ಯೋಜನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಅವರು ದೆಹಲಿಗೆ ಕರೆತರಲು ಯತ್ನಿಸಿದ್ದರು.
ರಾಹುಲ್ ಗಾಂಧಿ ಅವರನ್ನು, ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಮೂರ್ನಾಲ್ಕು ಕಾರ್ಯಾಧ್ಯಕ್ಷರ ಜೊತೆ ಪುನಃ ರಾಷ್ಟ್ರೀಯ ಅಧ್ಯಕ್ಷನಾಗಿ ನಿಯೋಜಿಸುವ ಉದ್ದೇಶ ಹೊಂದಿದ್ದರು.
ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ದುರ್ಬಲವಾಗಿರುವ ಪಕ್ಷದ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಿಂದ ಯಾವುದೇ ರೀತಿಯಾದ ಪ್ರಯೋಜನ ಇಲ್ಲ ಎಂದು ತಮ್ಮ ಆಪ್ತರೊಂದಿಗೆ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.